ಗಣಪತಿ ಭಾಗವತರು ಕಳೆದ 50 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಒಂದೇ ಉದ್ಯೋಗದಲ್ಲಿ ಹಾಗೂ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದೀಗ 70 ವರ್ಷ!
50 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಗಣಪತಿ ಭಾಗವತ ಅವರು ತಮ್ಮ ಕೆಲಸ ಬದಲಿಸಲಿಲ್ಲ. ದೊಡ್ಡ ಮೊತ್ತದ ವೇತನಕೊಡಿ ಎಂದು ಸಹ ಕಂಪನಿಗೆ ದುಂಬಾಲು ಬೀಳಲಿಲ್ಲ. ಕಂಪನಿಯಲ್ಲಿ ಅವಕಾಶವಿದ್ದರೂ ಅದನ್ನು ಬಳಸಿಕೊಂಡು ಉನ್ನತ ಹುದ್ದೆಗೆ ಹೋಗಲಿಲ್ಲ. ಅವರ ಪ್ರಾಮಾಣಿಕ ಸೇವೆ ಅರಿತಿದ್ದ ಕಂಪನಿಯೂ 60 ವರ್ಷ ದಾಟಿದರೂ ಅವರ ಸೇವೆಯನ್ನು ಕೈಬಿಡಲಿಲ್ಲ. ನಿವೃತ್ತಿ ನಂತರವೂ ಅದೇ ಕಂಪನಿಯಲ್ಲಿ ಕೆಲಸ ಮುಂದುವರೆಸಿದ್ದು, ವೃತ್ತಿ ಜೀವನ ಶುರುವಾದಾಗಲಿನಿಂದ ನಿವೃತ್ತಿ ನಂತರವೂ ಒಂದೇ ಕಂಪನಿಯಲ್ಲಿನ ಒಂದೇ ಹುದ್ದೆಯಲ್ಲಿ ದುಡಿಯುತ್ತಿರುವವರು ಗಣಪತಿ ಭಾಗವತ್ ಅವರನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ.
ಕುಮಟಾ ತಾಲೂಕಿನ ಹಂದಿಗೋಣ ಗಣಪತಿ ಭಾಗವತ ಅವರ ಊರು. ತಮ್ಮ 20ನೇ ವಯಸ್ಸಿನಲ್ಲಿ 300ರೂ ಪಗಾರಿಗೆ ಅವರು `ಎರೋಸ್ ಫಾರ್ಮಾ’ ಕಂಪನಿ ಸೇರಿದರು. ವೈದ್ಯರನ್ನು ಭೇಟಿಯಾಗಿ ಕಂಪನಿಯ ಔಷಧಗಳ ಬಗ್ಗೆ ವಿವರಿಸುವ ಔಷಧ ಪ್ರಚಾರಕರಾಗಿ (ಮೆಡಿಕಲ್ ರೆಪ್ರೆಸೆಂಟೇಟಿವ್) ಅವರು ಕೆಲಸ ಶುರು ಮಾಡಿದರು. `ಎರೋಸ್ ಫಾರ್ಮಾ’ ಕಂಪನಿ ಮಾಲಕರು ಬದಲಾದರೂ ಅಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿದ್ದ ಗಣಪತಿ ಭಾಗವತ ಅವರು ಬದಲಾಗಲಿಲ್ಲ!
ಗಣಪತಿ ಭಾಗವತ ಅವರಲ್ಲಿ ಸಾಕಷ್ಟು ಔಷಧ ಕಂಪನಿಯವರು ಬಂದಿದ್ದರು. `ನೀವು ನಮ್ಮ ಕಂಪನಿ ಪ್ರತಿನಿಧಿಸಿ’ ಎಂದು ಅವರು ಬಗೆ ಬಗೆಯಾಗಿ ಕೇಳಿಕೊಂಡಿದ್ದರು. ಉನ್ನತ ಹುದ್ದೆ, ಅತ್ಯಧಿಕ ವೇತನದ ಜೊತೆ ಇನ್ನಷ್ಟು ಸೌಕರ್ಯದ ಭರವಸೆ ನೀಡಿದ್ದರು. ಆದರೆ, ಗಣಪತಿ ಭಾಗವತ ಅವರು ಅದ್ಯಾವುದನ್ನು ಒಪ್ಪಲಿಲ್ಲ. ವೈದ್ಯರು ಹಾಗೂ ಔಷಧ ವ್ಯಾಪಾರಿಗಳಿರಿಸಿಕೊಂಡ ನಂಬಿಕೆಯ ವಿರುದ್ಧ ಅವರು ಎಂದಿಗೂ ಕೆಲಸ ಮಾಡಲಿಲ್ಲ.
ಮೊದಲ 5 ವರ್ಷಗಳ ಕಾಲ ಕೊಡಗು, ಹಾಸನ, ಚಿಕ್ಕಮಂಗಳೂರು ಕಡೆ ಕೆಲಸ ಮಾಡಿದ ಗಣಪತಿ ಭಾಗವತರು ಅದಾದ ನಂತರ ಉತ್ತರ ಕನ್ನಡ ಜಿಲ್ಲೆಗೆ ಬಂದರು. ಶಿರಸಿಯನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು 45 ವರ್ಷಗಳ
35 ವರ್ಷ ಅವರು ಜಿಲ್ಲೆಯ ಮೂಲೆ ಮೂಲೆಯನ್ನು ಸುತ್ತಾಡಿದರು. 60ನೇ ವಯಸ್ಸಿಗೆ ಕುಮಟಾದ ಹಂದಿಗೋಣಕ್ಕೆ ಬಂದ ಅವರು ಕಾರವಾರದಿಂದ-ಭಟ್ಕಳದವರೆಗೆ ಎರೋಸ್ ಫಾರ್ಮಾದ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಮುಂದುವರೆದರು. ಶಿರಸಿ ಹಾಗೂ ಸುತ್ತಮುತಲಿನ ಹೊಣೆಯನ್ನು ರಾಮಕೃಷ್ಣ ಹೆಗಡೆ ಅವರಿಗೆವಹಿಸಿದರು. ಬೆಳಗ್ಗೆ 4.30ಕ್ಕೆ ಎದ್ದು ಕೊಟ್ಟಿಗೆ ಕೆಲಸ, ಯೋಗ ಮಾಡಿ 8.30ಕ್ಕೆ ಮನೆಯಿಂದ ಹೊರಬಿದ್ದರೆ ಊರು-ಊರು ಸುತ್ತಾಟ ಗಣಪತಿ ಭಾಗವತ ಅವರ ನಿತ್ಯದ ಕಾಯಕ. ಮೊದಲೆಲ್ಲ ರಾತ್ರಿ 9-10ಗಂಟೆಗೆ ಮನೆಗೆ ಬರುತ್ತಿದ್ದ ಅವರು ಈಗೀಗ ಸಂಜೆ 5 ಗಂಟೆಯೊಳಗೆ ಮನೆ ತಲುಪುತ್ತಾರೆ.
`ಆ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 200 ವೈದ್ಯರಿದ್ದರು. ಇದೀಗ 400ಕ್ಕೂ ಅಧಿಕ ವೈದ್ಯರಿದ್ದಾರೆ. ಹೀಗಾಗಿ ಕರಾವಳಿ ಭಾಗದ ಹೊಣೆಯನ್ನು ಮಾತ್ರ ಕಂಪನಿ ನನಗೆವಹಿಸಿದೆ. ಅದನ್ನು ಮೊದಲಿನಂತೆ ಖುಷಿಯಿಂದ ಮಾಡುತ್ತಿದ್ದೇನೆ’ ಎಂದು ಗಣಪತಿ ಭಾಗವತ್ ಅವರು ಅನಿಸಿಕೆ ಹಂಚಿಕೊoಡರು. `ಸದಾ ನಗುಮುಖ, ಚುರುಕು ವ್ಯಕ್ತಿತ್ವವೇ ಗಣಪತಿ ಭಾಗವತ್ ಅವರ ಜೀವನ ರಹಸ್ಯ. ಅವರು ಸಹಾಯ ಹಸ್ತ ಚಾಚಿದವರಿಗೆ ತಮ್ಮ ಕೈಮೀರಿ ಸಹಾಯ ಮಾಡುವ ಪ್ರವೃತ್ತಿಯ ಜನ’ ಎಂದು ಶಿರಸಿಯ ಆಯುರ್ವೇದಿಕ್ ವೈದ್ಯ ಡಾ ರವಿಕಿರಣ ಪಟವರ್ಧನ್ ವ್ಯಕ್ತಿತ್ವ ಪರಿಚಯ ಮಾಡಿಸಿದರು.
Discussion about this post