ಊಟಕ್ಕೆ ಬಡಿಸುವ ವಿಚಾರದಲ್ಲಿ ಕುಮಟಾದ ಕುಟುಂಬವೊoದರಲ್ಲಿ ಬಿರುಕು ಮೂಡಿದೆ. ಇದೇ ವಿಷಯವಾಗಿ ಆನಂದು ಆಗೇರ್ ಹಾಗೂ ಅವರ ಮಗ ಅನೀಲ ಆಗೇರ್ ನಡುವೆ ಹೊಡೆದಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಅಂಕೋಲಾ ಬಾಳೆಗುಳಿಯ ಆನಂದು ಆಗೇರ್ ಅವರು ಗೋಕರ್ಣ ಬಳಿಯ ತಲಗೇರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಆನಂದು ಆಗೇರ್ ಅವರ ಪತ್ನಿ ಜ್ಯೋತಿ ಆಗೇರ್ ಸಹ ಮನೆ ಕೆಲಸ ಮಾಡಿಕೊಂಡು ವಾಸವಾಗಿದ್ದು, ಆನಂದು ಅವರ ಮಗ ಅನೀಲ ಆಗೇರ್ ಸಹ ಅವರೊಟ್ಟಿಗೆ ಇದ್ದಾರೆ.
ಜೂನ್ 24ರಂದು ಕೂಲಿ ಕೆಲಸ ಮುಗಿಸಿ ಬಂದ ಆನಂದು ಆಗೇರ್ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದರು. ಈ ವೇಳೆ ಯಾವುದೋ ಕಾರಣಕ್ಕೆ ಆನಂದು ಆಗೇರ್ ಹಾಗೂ ಜ್ಯೋತಿ ಆಗೇರ್ ನಡುವೆ ಜಗಳವಾಯಿತು. ಅಲ್ಲಿಯೇ ಇದ್ದ ಅನೀಲ ಆಗೇರ್ `ಜಗಳ ಮಾಡಬೇಡಿ’ ಎಂದರು. ಆದರೂ, ಅವರ ನಡುವಿನ ವಾಗ್ವಾದ ಕಡಿಮೆ ಆಗಿರಲಿಲ್ಲ.
ಆಗ ತಂದೆಗೆ `ಬೋ.. ಮಗನೆ’ ಎಂದು ಬೈದ ಅನೀಲ ಆಗೇರ್ ಅಲ್ಲಿದ್ದ ಖುರ್ಚಿಯಿಂದ ಆನಂದು ಆಗೇರ್ ಅವರಿಗೆ ಹೊಡೆದರು. `ನಿಂದು ದಿನಾ ಇದೇ ಆಯಿತು. ಮನೆಗೆ ಬಂದ ತಕ್ಷಣ ಗಲಾಟೆ ಮಾಡುವುದು’ ಎಂದು ಜೋರಾಗಿ ಬೊಬ್ಬೆ ಹೊಡೆದರು. ಆನಂದು ಆಗೇರ್ ಸಹ ಮರಳಿ ಕೈ ಮಾಡಲು ಪ್ರಯತ್ನಿಸಿದರು. ಆದರೆ, ಮಗ ನೀಡಿದ ಪೆಟ್ಟಿನಿಂದ ಗಾಯಗೊಂಡ ಅವರು ಅಲ್ಲಿಯೇ ಕುಸಿದು ಬಿದ್ದರು.
ಅದಾದ ನಂತರ ಗೋಕರ್ಣ ಪೊಲೀಸ್ ಠಾಣೆಗೆ ಹೋದ ಆನಂದು ಆಗೇರ್ ಅವರು ಮನೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಮಗ ಹೊಡೆದದನ್ನು ಹೇಳಿ ಪುತ್ರನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು.
