ಹೊನ್ನಾವರದ ನಿಕ್ಕಿ ಲುಪಿಸ್ ಅವರು ಅಂಕೋಲಾದ ವಿಕ್ಟೊರಿಯಾ ಫರ್ನಾಂಡಿಸ್ ಅವರ ಜೊತೆ ಹೊಟೇಲಿಗೆ ಹೋದಾಗ ಹೊಡೆದಾಟ ನಡೆದಿದೆ. ಅಣ್ಣ-ತಮ್ಮಂದಿರೇ ಗಾಜಿನ ಬಾಟಲಿಯಿಂದ ಹೊಡೆದು ನಿಕ್ಕಿ ಲುಪಿಸ್ ಅವರಿಗೆ ಗಾಯ ಮಾಡಿದ್ದಾರೆ.
ಹೊನ್ನಾವರದ ಕೆಳಗಿನ ಕಾಸರಕೋಡು ಬಳಿ ನಿಕ್ಕಿ ಲುಪಿಸ್ ಅವರು ವಾಸವಾಗಿದ್ದಾರೆ. ಹೊಟೇಲ್ ಕೆಲಸ ಮಾಡಿಕೊಂಡಿರುವ ನಿಕ್ಕಿ ಲುಪಿಸ್ ಅವರ ಜೊತೆ ತಾಯಿ ಮಮತಾ ಲುಪಿಸ್, ವಿಕ್ಕಿ ಲುಪಿಸ್ ಹಾಗೂ ಅಖಿಲ್ ಲುಪಿಸ್ ಜೊತೆಗಿದ್ದಾರೆ. ಜೂನ್ 24ರಂದು ಸಿಂಜಾವ ಪೆಸ್ತಾ ಹಬ್ಬದ ಅಂಗವಾಗಿ ನಿಕ್ಕಿ ಲುಪಿಸ್ ಅವರು ಅಂಕೋಲಾ ರಾಮನಗುಳಿಯ ಗೆಳತಿ ವಿಕ್ಟೊರಿಯಾ ಫರ್ನಾಂಡಿಸ್ ಅವರ ಜೊತೆ ಹೊನ್ನಾವರದ ಸಾಗರ ರೆಸ್ಟೋರೆಂಟಿಗೆ ಹೋಗಿದ್ದರು.
ಆ ಹೊಟೇಲೊಗೆ ವಿಕ್ಕಿ ಹಾಗೂ ಅಖಿಲ್ ಸಹ ಆಗಮಿಸಿದ್ದು, ಹೊಟೇಲ್ ಒಳಗೆ ಸಹೋದರರಿಬ್ಬರು ಜಗಳವಾಡುತ್ತಿದ್ದರು. ಈ ವೇಳೆ ಕೆಳಗಿಕೇರಿ ಕಾಸರಕೋಡ ಜೇಸನ ಫರ್ನಾಂಡಿಸ್ ಹಾಗೂ ಲಿಯೋನಾಡ್ ರೊಡ್ರಿಗಸ್ ಅಲ್ಲಿಗೆ ಆಗಮಿಸಿದರು. ಆಗ, ಜೇಸನ್ ಫನಾಂಡಿಸ್ ಅವರು ಲಿಯೋನಾಡ್ ರೋಡ್ರಿಗಸ್ ಅವರ ಬಳಿ `ನಿನ್ನ ಬೈಕಿನ ಕೀ ಕೊಡು’ ಎಂದರು. `ಬೈಕ್ ಕೀ ಕೊಡುವುದಿಲ್ಲ’ ಎಂದು ಲಿಯೋನಾಡ್ ರೋಡ್ರಿಗಸ್ ಹೇಳಿದರು. ಆಗ, ಮಧ್ಯಸ್ಥಿಕೆವಹಿಸಿದ ಅಖಿಲ ಲೋಪಿಸ್ `ನೀ ಯಾಕೆ ಕೀ ಕೊಡುವುದಿಲ್ಲ’ ಎಂದು ಲಿಯೋನಾಡ್ ರೋಡ್ರಿಗಸ್ ಅವರನ್ನು ಪ್ರಶ್ನಿಸಿದರು.
`ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡ’ ಎಂದು ನಿಕ್ಕಿ ಲುಪಿಸ್ ಅವರು ತಮ್ಮನಾದ ಅಖಿಲ ಲುಪಿಸ್ ಅವರಿಗೆ ಹೇಳಿದರು. ಹೊಟೇಲ್ ಹೊರಗೆ ಕರೆದೊಯ್ದು ಬುದ್ದಿ ಹೇಳುವಾಗ ಅಖಿಲ್ ಲುಪಿಸ್ ಅವರು ನಿಕ್ಕಿ ಲುಪಿಸ್ ಅವರ ಎರಡು ಕೈ ಹಿಡಿದರು. ಆಗ, ವಿಕ್ಕಿ ಲುಪಿಸ್ ಅಲ್ಲಿಗೆ ಆಗಮಿಸಿ ಅಣ್ಣನ ಕೆನ್ನೆಗೆ ಎರಡು ಬಾರಿಸಿದರು. ಅದಾದ ನಂತರ ಅಲ್ಲಿದ್ದ ಗಾಜಿನ ಬಾಟಲಿಯಿಂದ ತಲೆಗೆ ಹೊಡೆದು ಗಾಯಗೊಳಿಸಿದರು. ಹೊಟೇಲಿನಲ್ಲಿದ್ದ ಜನ ಈ ಹೊಡೆದಾಟ ಬಿಡಿಸಿ ನಿಕ್ಕಿ ಲುಪಿಸ್ ಅವರನ್ನು ರಕ್ಷಿಸಿದರು.
ಇದಾದ ನಂತರ ವಿಕ್ಟೋರಿಯಾ ಫರ್ನಾಂಡಿಸ್ ಹಾಗೂ ಮಹಮದ್ ಆಸೀಪ್ ಸೇರಿ ಗಾಯಗೊಂಡ ನಿಕ್ಕಿ ಲುಪಿಸ್ ಅವರನ್ನು ಹೊನ್ನಾವರ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚೇತರಿಸಿಕೊಂಡ ಮೇಲೆ ನಿಕ್ಕಿ ಲುಪಿಸ್ ಸಹೋದರರ ವಿರುದ್ಧ ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
