ಅಂಕೋಲಾದ ಹಳವಳ್ಳಿಯ ಸಾದ್ವಿ ಹೆಬ್ಬಾರ್ ತಮ್ಮ ಎರಡುವರೆ ವರ್ಷದಲ್ಲಿಯೇ ಸಗಣಿ ಗುಂಡಿಗೆ ಬಿದ್ದು ಸಾವನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ನೆರೆದಿದ್ದವರ ಕಣ್ಣೀರಿಗೆ ಕಾರಣವಾಗಿದೆ.
ಹಳವಳ್ಳಿ ಗ್ರಾಮದ ಮೂಲೆಮನೆಯಲ್ಲಿ ಶ್ರೀಕಾಂತ ಹೆಬ್ಬಾರ್ ಹಾಗೂ ರೂಪಾ ಹೆಬ್ಬಾರ್ ಅನ್ಯೋನ್ಯವಾಗಿ ಬದುಕು ಕಟ್ಟಿಕೊಂಡಿದ್ದರು. ಈ ದಂಪತಿ ಕೃಷಿ-ಹೈನುಗಾರಿಕೆ ಕಾಯಕ ಮಾಡಿ ಜೀವನ ನಡೆಸಿಕೊಂಡಿದ್ದರು. ಈ ದಂಪತಿಗೆ ಮಗುವಾಗಿ ಜನಿಸಿದ್ದ ಸಾದ್ವಿ ಹೆಬ್ಬಾರ್ ಅತ್ಯಂತ ಚುರುಕಾಗಿದ್ದರು.
ಬುಧವಾರ ಎಂದಿನoತೆ ಸಾದ್ವಿ ತಂದೆ ಜೊತೆ ದನದ ಕೊಟ್ಟಿಗೆಗೆ ಹೋಗಿದ್ದರು. ಶ್ರೀಕಾಂತ ಹೆಬ್ಬಾರ್ ಅವರು ಅಲ್ಲಿ ಕೆಲಸ ಮಾಡುತ್ತಿದ್ದಾಗ ಸಾದ್ವಿ ಸಹ ಆಡುತ್ತಿದ್ದರು. ಕೆಲ ಕಾಲ ಮಗುವಿನ ಜೊತೆ ಮಾತನಾಡುತ್ತಿದ್ದ ಹೆಬ್ಬಾರ್ ಅವರು ನಂತರ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಕೆಲ ಸಮಯದ ಬಳಿಕ ಮಗುವಿನ ಮಾತು ಕೇಳಲಿಲ್ಲ. ಮಗು ಎಲ್ಲಿ ಹೋಯಿತು? ಎಂದು ಹುಡುಕಾಟ ಶುರು ಮಾಡಿದರು.
ಆಗ, ಸಾದ್ವಿ ಹೆಬ್ಬಾರ್ ಸಗಣಿ ಗುಂಡಿಯಲ್ಲಿ ಬಿದ್ದಿರುವುದು ಕಾಣಿಸಿತು. ತಕ್ಷಣ ಶ್ರೀಕಾಂತ ಹೆಬ್ಬಾರ್ ಅವರು ಗುಂಡಿಯಿAದ ಮಗುವನ್ನು ಮೇಲೆತ್ತಿದರು. ಮಗುವಿನ ಚಲನೆಯಿಲ್ಲದ ಕಾರಣ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಸಾದ್ವಿ ಹೆಬ್ಬಾರ್ ಕೊನೆಯುಸಿರೆಳೆದಿದ್ದನ್ನು ವೈದ್ಯರು ದೃಢಪಡಿಸಿದರು.
