ನಿಸರ್ಗ ಸೌಂದರ್ಯ ಹಾಗೂ ಪೃಕೃತಿ ವೈಶಿಷ್ಟ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದಕ್ಕಾಗಿ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರ ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಮಳೆಯಲ್ಲಿ ಮಕ್ಕಳು ಕುಣಿದು ಕುಪ್ಪಳಿಸಿದರು.
ಬಣ್ಣದ ಬಟ್ಟೆ ಧರಿಸಿ ಶಾಲೆಗೆ ಬಂದಿದ್ದ ಚಿಣ್ಣರು ಬಣ್ಣ ಬಣ್ಣದ ಕೊಡೆ ಹಿಡಿದು ಮಳೆ ನೀರಿನಲ್ಲಿ ಆಟವಾಡಿದರು. ಸಂಭ್ರಮದಿoದ ಕೇಕೆ ಹಾಕಿ ಮೈ-ಮನ ಪುಳಕವಾಗುವಂತೆ ನರ್ತಿಸಿದರು. ಜಲಚಕ್ರದ ಪರಿಷಯದ ಜೊತೆಗೆ ನೀರಿನ ಸಂರಕ್ಷಣೆ ಕುರಿತು ಈ ವೇಳೆ ಚಿಣ್ಣರಿಗೆ ಮನವರಿಕೆ ಮಾಡಲಾಯಿತು.
ಕೆಲ ಕಾಲ ಸಹಜ ಮಳೆಯಲ್ಲಿ ಕುಣಿದ ಮಕ್ಕಳು ಮಳೆ ಕಡಿಮೆಯಾದ ನಂತರ ಇನ್ನಷ್ಟು ಆಟಕ್ಕಾಗಿ ಪಟ್ಟು ಹಿಡಿದರು. ಆಗ, ಶಿಕ್ಷಕರು ಉಪಾಯದಿಂದ ಕೃತಕ ಮಳೆ ಸುರಿಸಿ ಮಕ್ಕಳ ಮನಸ್ಸು ಗೆದ್ದರು. ಪರಿಸರದ ನೈಸರ್ಗಿಕ ವ್ಯವಸ್ಥೆಯ ಬಗ್ಗೆ ತಿಳಿಸುವ ಬಗ್ಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾನವನ ಬದುಕಿಗೆ ಅಗತ್ಯವಾದ ಜಲಚಕ್ರದ ಮೂಲಭೂತ ಕಲ್ಪನೆಯ ಬಗ್ಗೆ ಅರಿವು ಮೂಡಿಸಲಾಯಿತು.
ಮಳೆ ಜೊತೆ ಹಾಡುಗಳನ್ನು ಹಾಡಿ ಮಕ್ಕಳು ಸಂಭ್ರಮಿಸಿದರು. ಶಿಕ್ಷಕರು ಸಹ ಮಕ್ಕಳ ಜೊತೆ ನೃತ್ಯ ಮಾಡಿದರು. ಮುಖ್ಯವಾಗಿ 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಈ ಆಟ-ಪಾಠ ನಡೆಸಲಾಗಿದ್ದು, ಉಳಿದ ಮಕ್ಕಳು ಅದನ್ನು ನೋಡಿ ಖುಷಿಪಟ್ಟರು.
