ಬಟ್ಟೆ ಅಂಗಡಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಮೋಹನ ನಾಯ್ಕ ಅವರು ಪರಿಚಯಸ್ಥರಿಬ್ಬರಿಗೆ ಸಾಲ ಕೊಡಿಸಿ ಅವರಿಂದಲೇ ಪೆಟ್ಟು ತಿಂದಿದ್ದಾರೆ. ಸಾಲ ಮರು ಪಾವತಿ ಮಾಡುವುದಾಗಿ ಮೋಹನ ನಾಯ್ಕ ಅವರನ್ನು ಕರೆದ ಅಣ್ಣ-ತಮ್ಮಂದಿರು ಅವರಿಗೆ ಕಲ್ಲಿನಿಂದ ಹೊಡೆದು ಗಾಯಗೊಳಸಿದ್ದಾರೆ.
ಭಟ್ಕಳದ ಬೈಲೂರು ಮಡಿಕೇರಿ ಬಳಿ ಮೋಹನ ನಾಯ್ಕ ಅವರು ಬಟ್ಟೆ ಅಂಗಡಿ ಮಾಡಿಕೊಂಡಿದ್ದಾರೆ. ಬೈಲೂರಿನ ಸಚಿನ ನಾಯ್ಕ ಹಾಗೂ ದರ್ಶನ ನಾಯ್ಕ ಅವರು ನಾಲ್ಕು ವರ್ಷದ ಹಿಂದೆ ಮೋಹನ ನಾಯ್ಕ ಅವರ ಬಳಿ ಹಣ ಕೇಳಿದ್ದರು.
ಹಣ ಇಲ್ಲದ ಕಾರಣ ಮೋಹನ ನಾಯ್ಕ ಅವರು ಆ ಇಬ್ಬರನ್ನು ಗುರುಕೃಪಾ ಬ್ಯಾಂಕಿಗೆ ಕರೆದೊಯ್ದು ತಮ್ಮ ಹೆಸರಿನಲ್ಲಿ ಸಾಲ ಮಾಡಿ, ಹಣ ಕೊಟ್ಟಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಸಚಿನ ನಾಯ್ಕ ಹಾಗೂ ದರ್ಶನ ನಾಯ್ಕ ಹಣ ಮರಳಿಸಿರಲಿಲ್ಲ. ಕೇಳಿ ಕೇಳಿ ಸುಸ್ತಾದ ಮೋಹನ ನಾಯ್ಕ ಅವರು ಅವರ ವಿಷಯವನ್ನು ಮರೆತಿದ್ದರು.
ಈ ನಡುವೆ ಜೂನ್ 26ರ ರಾತ್ರಿ ಸಚಿನ್ ನಾಯ್ಕ ಅವರು ಮೋಹನ ನಾಯ್ಕ ಅವರಿಗೆ ಫೋನ್ ಮಾಡಿ ಮಡಿಕೇರಿ ರಸ್ತೆಯ ವಿನಾಯಕ ಅಂಗಡಿ ಬಳಿ ಬರುವಂತೆ ತಿಳಿಸಿದರು. ಜೊತೆಗೆ ಪಡೆದಿದ್ದ ಸಾಲದ ಹಣ ಮರಳಿಸುವ ಭರವಸೆಯನ್ನು ನೀಡಿದ್ದರು. ಹಣ ಸಿಗುವ ಆಸೆಯಿಂದ ಮೋಹನ ನಾಯ್ಕ ಅವರು ಅಲ್ಲಿ ಹೋದರು.
ಆದರೆ, ಸಚಿನ್ ನಾಯ್ಕ ಮೋಹನ್ ನಾಯ್ಕ ಅವರ ಮೇಲೆ ಕಲ್ಲು ತೂರಾಟ ಮಾಡಿದರು. ಅಲ್ಲಿದ್ದ ದರ್ಶನ ನಾಯ್ಕ ಸಹ ಕಲ್ಲಿನಿಂದ ಮೋಹನ ನಾಯ್ಕ ಅವರ ಮುಖ, ತಲೆಗೆ ಜಜ್ಜಿದರು. ಗಾಯಗೊಂಡ ಮೋಹನ ನಾಯ್ಕ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡೆದಿದ್ದು, ನಂತರ ತಮಗಾದ ಅನ್ಯಾಯದ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
