ಗೋಕರ್ಣ ಪ್ರವಾಸಿ ಮಂದಿರದ ಬಳಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ರೆಸಾರ್ಟ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರೆಲ್ಲರೂ ಮಾದಕ ವ್ಯಸನ ಸೇವಿಸಿರುವುದು ದೃಢವಾಗಿದೆ. ಈ ಹಿನ್ನಲೆ ಐವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಸಾಣಿಕಟ್ಟಾದ ಆನಂದ ನಾಯ್ಕ ರೆಸಾರ್ಟವೊಂದರ ಉದ್ಯೋಗಿ. ಅದೇ ರೆಸಾರ್ಟಿನಲ್ಲಿ ಗದಗದ ಪವನಕುಮಾರ ರಾಮಣ್ಣನವರ್ ಸಹ ಮ್ಯಾನೇಜರ್ ಆಗಿದ್ದಾರೆ. ಈ ಇಬ್ಬರು ಸೇರಿ ರೆಸಾರ್ಟಿಗೆ ಆಗಮಿಸುವವರಿಗೆ ಮಾದಕ ವ್ಯಸನ ನೀಡುತ್ತಿದ್ದು, ತಾವು ಅದನ್ನು ಸೇವಿಸುತ್ತಿದ್ದರು.
ಅದರಂತೆ ಜೂನ್ 29ರಂದು ಗೋಕರ್ಣ ಬಳಿಯ ಅಜ್ಜಿ ಹಕ್ಕಲಿನಲ್ಲಿ ವಾಸವಾಗಿರುವ ಉತ್ತರಖಂಡದ ಅಮೇಶ ತಾಪಿ, ಸುರಬ್ ಠಾಕೂರ್ ಹಾಗೂ ದೇವ್ ಯಾದವ್ ಅವರ ಜೊತೆಗೂಡಿ ಆನಂದ ನಾಯ್ಕ ಹಾಗೂ ಪವನಕುಮಾರ ರಾಮಣ್ಣನವರ್ ಮಾದಕ ವ್ಯಸನದ ಪಾರ್ಟಿ ಮಾಡಿದ್ದರು.
ನಶೆಯಲ್ಲಿ ತೂರಾಡುತ್ತಿದ್ದ ಆ ಐವರನ್ನು ಗೋಕರ್ಣ ಪಿಎಸ್ಐ ಖಾದರ್ ಭಾಷಾ ವಿಚಾರಣೆಗೆ ಒಳಪಡಿಸಿದರು. ಅನುಮಾನದ ಹಿನ್ನಲೆ ಅವರೆಲ್ಲರನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಅಲ್ಲಿ ತಪಾಸಣೆ ನಡೆಸಿದಾಗ ಎಲ್ಲರೂ ಗಾಂಜಾ ನಶೆಯಲ್ಲಿರುವುದು ಗೊತ್ತಾಯಿತು. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಪಿಎಸ್ಐ ಶಶಿಧರ ಕೆ ಎಚ್ ತನಿಖೆ ನಡೆಸುತ್ತಿದ್ದಾರೆ.
ಮದ್ಯ ಮಾರಾಟಗಾರನ ಸೆರೆ
ದಾವಣಗೆರೆಯಿಂದ ಬಂದು ಗೋಕರ್ಣ ಬಳಿಯ ಹನೇಹಳ್ಳಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಗಣೇಶ ರೇವಣ್ಕರ್ ಶ್ರೀಮಂತರಾಗಿರುವ ಬಗ್ಗೆ ಅನೇಕರು ಅಚ್ಚರಿವ್ಯಕ್ತಪಡಿಸಿದ್ದರು.
ಹನೆಹಳ್ಳಿ ಗ್ರಾಮದ ಮುರ್ಕಂಡಿ ದೇವಸ್ಥಾನದ ಹತ್ತಿರ ಬಂಕಿಕೊಡ್ಲ ಹನೆಹಳ್ಳಿ ರಸ್ತೆ ಪಕ್ಕ ಗಣೇಶ ರೇವಣ್ಕರ್ ಶೆಡ್ ನಿರ್ಮಿಸಿದ್ದರು. ಅಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸಿದ್ದರು. ಬಂದವರಿಗೆಲ್ಲ ಅಲ್ಲಿ ಮದ್ಯ ಸರಬರಾಜು ಮಾಡುವುದರ ಜೊತೆ ಅವರ ಜೊತೆ ಗಣೇಶ ರೇವಣ್ಕರ್ ಸಹ ಮದ್ಯ ಸೇವಿಸಿ ಮೋಜು-ಮಸ್ತಿಯಲ್ಲಿರುತ್ತಿದ್ದರು.
ಗಣೇಶ ರೇವಣಕರ್ ಅವರ ಆದಾಯದ ಮೂಲ ಹುಡುಕಿದ ಪೊಲೀಸರಿಗೆ ಮದ್ಯ ಮಾರಾಟದ ವಿಷಯ ತಿಳಿಯಿತು. ಜೂನ್ 29ರಂದು ಶೆಡ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಅಕ್ರಮ ಸರಾಯಿಯನ್ನು ವಶಕ್ಕೆಪಡೆದರು. ಗೋಕರ್ಣ ಪಿಎಸ್ಐ ಶಶಿಧರ್ ಎಚ್ ಕೆ ಪ್ರಕರಣ ದಾಖಲಿಸಿಕೊಂಡರು.
