ಶಿರಸಿ ಸತ್ಕಾರ್ ಹೊಟೇಲ್ ಎದುರಿನ ಅಯ್ಯಂಗಾರ್ ಬೇಕರಿಯಲ್ಲಿ ಕೊಳೆತ ಕೇಕ್‌ಗೂ ಕಾಸುಪಡೆದದಕ್ಕಾಗಿ ಮಾಲಕರು ಗ್ರಾಹಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೊನೆಗೆ `ಅಚಾತುರ್ಯದಿಂದ ತಪ್ಪಾಗಿದೆ. ಕ್ಷಮಿಸಿಬಿಡಿ’ ಎಂದು ಬೇಕರಿಯವರು ಅಂಗಲಾಚಿದ್ದಾರೆ.
ಶಿರಸಿಯ ಸತ್ಕಾರ್ ಹೊಟೇಲಿನ ಬಳಿ ಹಾಸನದ ತಿಲಕ್ ಎಂಬಾತರು ಕಳೆದ ಮೂರು ವರ್ಷದಿಂದ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದಾರೆ. ಜುಲೈ 2ರಂದು ಶಿರಸಿಯಲ್ಲಿ ಮೊಬೈಲ್ ಅಂಗಡಿ ನಡೆಸುವ ಪವನ್ ಎಂಬಾತರು ಮಗನ ಹುಟ್ಟುಹಬ್ಬಕ್ಕಾಗಿ ಕೇಕ್ ಪಡೆದಿದ್ದರು. ಸಂಜೆ ಇನ್ನೊಂದು ಕೇಕ್ ಸ್ವೀಕರಿಸಿ ಅದನ್ನು ಮನೆಗೆ ಒಯ್ದಿದ್ದರು.
ಮಗನ ಹುಟ್ಟುಹಬ್ಬದ ಆಚರಣೆ ವೇಳೆ ಕೇಕ್ ಹಳಸಿರುವುದು ಗಮನಕ್ಕೆ ಬಂದಿತು. ಬೇಕರಿಯವರು ಬೆಳಗ್ಗೆ ಮಾಡಿದ್ದ ಕೇಕ್’ನ್ನು ಹಾಗೇ ಪ್ಯಾಕ್ ಮಾಡಿ ಪವನ್ ಅವರಿಗೆ ವಿತರಿಸಿದ್ದು, ಇದರಿಂದ ಹುಟ್ಟು ಹಬ್ಬದ ಕಾರ್ಯಕ್ರಮವೇ ಹಾಳಾಯಿತು. ಇದರಿಂದ ಸಿಟ್ಟಾದ ಪವನ್ ಅವರು ನೇರವಾಗಿ ಬೇಕರಿಗೆ ಬಂದರು. ಆ ಕೇಕ್ ಕಾಣಿಸಿ ಕೂಗಾಡಿದರು. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಬೇಕರಿ ಸಿಬ್ಬಂದಿ ಪರಿತಪಿಸಿದರು. ಆದರೆ, ಸಿಟ್ಟಿನಲ್ಲಿದ್ದ ಪವನ್ ಅವರು ಅದನ್ನು ಒಪ್ಪಲಿಲ್ಲ.
`ತನಗಾದ ರೀತಿ ಬೇರೆ ಯಾರಿಗೂ ಆಗಬಾರದು’ ಎಂದು ಪವನ್ ಅವರು ಅಲ್ಲಿನ ವಿದ್ಯಮಾನಗಳ ಬಗ್ಗೆ ವಿಡಿಯೋ ಮಾಡಿದರು. ಬೇಕರಿಯ ಬೇಜವಬ್ದಾರಿ ಬಗ್ಗೆ ನಗರಸಭೆಯವರಿಗೆ ದೂರುವುದಾಗಿ ಹೇಳಿದರು. `ನಾನು ಊರಿಗೆ ಹೋಗಿ ಶಿರಸಿಗೆ ಮರಳುತ್ತಿದ್ದೇನೆ. ಬೇಕರಿ ಸಿಬ್ಬಂದಿಯ ಅಚಾತುರ್ಯದಿಂದ ತಪ್ಪಾಗಿದೆ. ಇನ್ಮುಂದೆ ಹಾಗೇ ಆಗದಂತೆ ಎಚ್ಚರವಹಿಸುವೆ’ ಎಂದು ಬೇಕರಿ ಮಾಲಕ ತಿಲಕ್ ಅವರು ಇದೀಗ ಫೋನಿನಲ್ಲಿ ತಿಳಿಸಿದರು.
Discussion about this post