ಸಾಲಗಾರರ ಕಿರುಕುಳಕ್ಕೆ ಬೇಸತ್ತ ದಂಪತಿ 20 ದಿನದ ಗಂಡು ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮಗು ಮಾರಾಟಗಾರರ ಜೊತೆ ಮಗು ಖರೀದಿಸಿದವರನ್ನು ಸಹ ದಾಂಡೇಲಿ ಪೊಲೀಸರು ಬಂಧಿಸಿದ್ದಾರೆ.
ಹಳೆದಾoಡೇಲಿಯ ಮೋಹನಾ ಚಂಡುಪಟೇಲ್ ಅವರು ಬೆಳಗಾವಿಯ ವ್ಯಕ್ತಿಯೊಬ್ಬರನ್ನು ವರಿಸಿದ್ದರು. ಜೂ 17ರಂದು ಅವರಿಗೆ ಗಂಡು ಮಗು ಜನಿಸಿದ್ದು, ದಾಂಡೇಲಿಯಲ್ಲಿ ಹೆರಿಗೆ ಆಗಿತ್ತು. ತವರು ಮನೆಗೆ ಬಂದಿದ್ದ ಮೋಹನಾ ಅವರಿಗೆ ಸಾಕಷ್ಟು ಸಾಲಗಳಿದ್ದವು. ಸಹಕಾರಿ ಸಂಘದ ಸಾಲದಿಂದ ಬೇಸತ್ತ ಈ ದಂಪತಿ ಸಾಲ ತೀರಿಸಿಲು ಮಗು ಮಾರಾಟಕ್ಕೆ ನಿರ್ಧರಿಸಿದ್ದರು.
ಅದರ ಪ್ರಕಾರ ಮಗು ಮಾರಾಟದ ಬಗ್ಗೆ ತಿಳಿದ ಬೆಳಗಾವಿಯ ನೂರ್ ಅಹ್ಮದ್ ಮಜೀದ್ 3 ಲಕ್ಷ ರೂ ನೀಡಿ ಆ ಮಗು ಖರೀದಿಸಿದ್ದರು. ಮೋಹನಾ ತವರುಮನೆಯಿಂದಲೇ ಈ ವ್ಯವಹಾರ ಕುದುರಿಸಿದ್ದು, ಇದಕ್ಕೆ ಕಿಶನ್ ಐರೇಕರ್ ಎಂಬಾತರು ನೆರವಾಗಿದ್ದರು. ಈ ಎಲ್ಲಾ ವಿಷಯ ಅರಿತ ಪೊಲೀಸರು ನೆರವು ನೀಡಿದ್ದ ಕಿಶನ್ ಐರೇಕರ್ ಜೊತೆ ಇನ್ನಿಬ್ಬರನ್ನು ವಶಕ್ಕೆಪಡೆದು ವಿಚಾರಣೆ ನಡೆಸಿದರು. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿದರು.
