ಗೋಕರ್ಣ ರಥಬೀದಿಯಲ್ಲಿರುವ ಜ್ಯೂಸ್ ಸೆಂಟರ್ ಮಳಿಗೆಗೆ ಶನಿವಾರ ನಸುಕಿನಲ್ಲಿ ಬೆಂಕಿ ಬಿದ್ದಿದೆ. ಮಳಿಗೆಯಲ್ಲಿದ್ದ ಫ್ರೀಜ್, ಗ್ರಾಂಡರ್ ಸೇರಿ ಅನೇಕ ಯಂತ್ರೋಪಕರಣಗಳು ಸುಟ್ಟು ಕರಕಲಾಗಿದೆ.
ಬೆಂಕಿ ಅವಘಡ ನೋಡಿದ ಜನ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್’ನ್ನು ಹೊರ ಎಸೆದು ಭಾರೀ ಪ್ರಮಾಣದ ಅನಾಹುತ ತಪ್ಪಿಸಿದ್ದಾರೆ. ಅಲ್ಲಿನವರ ಸಮಯಪ್ರಜ್ಞೆಯಿಂದ ಸಿಲೆಂಟರ್ ಸ್ಪೋಟವಾಗುವುದು ತಪ್ಪಿದ್ದು, ಒಂದಷ್ಟು ಜನರ ಜೀವ ಉಳಿದಿದೆ. ಅದಾದ ನಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಫೋನ್ ಮಾಡಿದ್ದಾರೆ. ಆದರೆ, ಬಿಎಸ್ಎನ್ಎಲ್ ನೆಟ್ವರ್ಕ ಸಮಸ್ಯೆಯಿಂದ ಯಾರಿಗೂ ಫೋನ್ ತಾಗಿಲ್ಲ!
ಕೊನೆಗೆ ಸುತ್ತಮುತ್ತಲಿನ ಜನರೇ ಕೊಡದಲ್ಲಿ ನೀರು ತಂದು ಬೆಂಕಿ ಆರಿಸುವ ಪ್ರಯತ್ನ ಮಾಡಿದರು. ಅಷ್ಟರೊಳಗೆ ಅನೇಕ ವಸ್ತುಗಳು ಸುಟ್ಟಿದ್ದವು. ಅದಾಗಿಯೂ ಪ್ರಯತ್ನಬಿಡದೇ ಬೆಂಕಿಯನ್ನು ಹತೋಟಿಗೆ ತಂದರು. ವಿದ್ಯುತ್ ಅವಘಡದಿಂದ ಈ ಅನಾಹುತ ನಡೆದ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಅಕ್ಕ-ಪಕ್ಕದಲ್ಲಿ ಸಾಲು ಸಾಲು ಮನೆಗಳಿದ್ದು, ಅಲ್ಲಿದ್ದವರೆಲ್ಲರೂ ಅನಾಹುತ ತಪ್ಪಿದ್ದರಿಂದ ನಿಟ್ಟುಸಿರು ಬಿಟ್ಟರು.
