ಅಥಣಿಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್ಸು ಹೊನ್ನಾವರದಲ್ಲಿ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಆ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೇರೆ ಬಸ್ಸುಗಳ ಮೂಲಕ ತಲುಪಬೇಕಾದ ಸ್ಥಳಕ್ಕೆ ತಲುಪಿಸಲಾಗಿದೆ.
ವಿಜಯಪುರದ ಬಸವರಾಜ ಬಂಗಿ ಎಂಬಾತರು ಜುಲೈ 12ರಂದು ಧರ್ಮಸ್ಥಳ ಬಸ್ಸು ಓಡಿಸುತ್ತಿದ್ದರು. ನಾಗಪ್ಪ ವರ್ಣೂರ್ ಅವರು ಆ ಬಸ್ಸಿನ ನಿರ್ವಾಹಕರಾಗಿದ್ದು, ಪ್ರಯಾಣಿಕರ ಟಿಕೆಟ್ ತೆಗೆದಿದ್ದರು. ಬಸ್ಸು ಹೊನ್ನಾವರದ ಬಸ್ ನಿಲ್ದಾಣ ಬಳಿಯ ಶಿರಸಿ ಅರ್ಬನ್ ಬ್ಯಾಂಕ್ ಮುಂದೆ ತಲುಪಿದಾಗ ಎದುರಿನಿಂದ ಜೋರಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆಯಿತು. ಪರಿಣಾಮ ಬಸ್ಸಿನ ಮುಂದಿನ ಭಾಗ ಜಖಂ ಆಯಿತು.
ಆ ಟಿಪ್ಪರ್ ಮುಂದೆ ಚಲಿಸಿ ಅಲ್ಲಿದ್ದ ಹಳೆ ತಹಶೀಲ್ದಾರ್ ಕಚೇರಿಯ ಕಪೌಂಡಿಗೆ ಗುದ್ದಿತು. ಅಪಘಾತ ಅರಿತ ಟಿಪ್ಪರ್ ಚಾಲಕ ಟಿಪ್ಪರ್ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು. ಬಸ್ ಚಾಲಕ-ನಿರ್ವಾಹಕರು ಪ್ರಯಾಣಿಕರ ಕ್ಷೇಮ ವಿಚಾರಿಸಿದರು. ಬಸ್ಸಿನಲ್ಲಿದ್ದ ಯಾರಿಗೂ ಗಾಯವಾಗಿರಲಿಲ್ಲ. ಅವರೆಲ್ಲರನ್ನು ಬೇರೆ ಬಸ್ಸಿನ ಮೂಲಕ ಕಳುಹಿಸಿಕೊಟ್ಟರು.
ಸರ್ಕಾರಿ ಕಚೇರಿಯ ಕಪೌಂಡಿಗೆ ಗುದ್ದಿರುವುದು ಹಾಗೂ ಸರ್ಕಾರಿ ಬಸ್ಸಿಗೆ ಗುದ್ದಿರುವುದು ಸೇರಿ ಟಿಪ್ಪರ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಟಿಪ್ಪರ್ ಚಾಲಕ ಪರಾರಿ ಆಗಿದ್ದರಿಂದ ಆತನ ಹೆಸರು-ವಿಳಾಸ ಗೊತ್ತಾಗಲಿಲ್ಲ.
