ವಿಪರೀತ ತ್ಯಾಜ್ಯ ಹಾಗೂ ಕೊಳಚೆಯಿಂದಾಗಿ ಗೋಕರ್ಣ ಕಡಲತೀರ ಗಬ್ಬೆದ್ದಿದೆ. ಕಡಲತೀರದ ಉದ್ದಗಲಕ್ಕೂ ಕಪ್ಪು ಮಿಶ್ರಿತ ಕಸ-ಕಡ್ಡಿಗಳು ಕಾಣಿಸುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರವಾದ ಗೋಕರ್ಣಕ್ಕೆ ನಿತ್ಯ ಸಾವಿರಾರು ಜನ ಬರುತ್ತಾರೆ. ಇಲ್ಲಿನ ಪ್ರಕೃತಿ ವೈಭವ, ಧಾರ್ಮಿಕ ಪವಿತ್ರತೆ ಹಾಗೂ ಕಡಲ ಸೌಂದಯಕ್ಕೆ ಪ್ರವಾಸಿಗರು ಮಾರು ಹೋಗುತ್ತಾರೆ. ಆದರೆ, ಅದೇ ಪ್ರವಾಸಿಗರು ಎಲ್ಲೆಂದರಲ್ಲಿ ಗಲೀಜು ಮಾಡುತ್ತಿರುವುದರಿಂದ ಕಡಲತೀರಕ್ಕೆ ಹಾನಿಯಾಗುತ್ತಿದೆ.
ಮಹಾಬಲೇಶ್ವರ ದೇವಾಲಯದ ಸಮೀಪವಿರುವ ಗೋಕರ್ಣದ ಮುಖ್ಯ ಕಡಲತೀರಕ್ಕೆ ನಿತ್ಯ ನೂರಾರು ಜನ ಸ್ನಾನಕ್ಕೆ ಬರುತ್ತಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಪವಿತ್ರ ಪುಣ್ಯ ಸ್ನಾನಕ್ಕೆ ಈ ಕಡಲತೀರ ಯೋಗ್ಯವಾಗಿಲ್ಲ. ಗೋಕರ್ಣದ ಓಂ ಬೀಚ್, ಕುಟ್ಲೆ ಬೀಚ್, ಹಾಫ್ಮೂನ್ ಬೀಚ್, ಪ್ಯಾರಾಡೈಸ್ ಬೀಚ್ ಸಹ ಇದಕ್ಕಿಂತ ಭಿನ್ನವಿಲ್ಲ.
ಕಸ-ಕಡ್ಡಿಗಳು ಹಾಗೂ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದ್ದರಿಂದ ಗೋಕರ್ಣ ಕಡಲತೀರ ಇದೀಗ `ಕಪ್ಪು ಸಮುದ್ರ’ವಾಗಿ ಬದಲಾಗಿದೆ. ಮಳೆಗಾಲದಲ್ಲಿ ಕಡಲತೀರ ಪ್ರವೇಶ ನಿಷೇಧಿಸಿದರೂ ಅಲ್ಲಿನ ತ್ಯಾಜ್ಯಗಳ ನಿಷೇಧ ಸಾಧ್ಯವಾಗಿಲ್ಲ. ತೀರದಲ್ಲಿ ಉಂಟಾಗುವ ದುರ್ಗಂಧ ಹಾಗೂ ಕಸದಿಂದ ಪ್ರವಾಸಿಗರು ಬೇಸತ್ತಿದ್ದಾರೆ. ಗೋಕರ್ಣದ ಎಲ್ಲಾ ತ್ಯಾಜ್ಯ ಹಾಗೂ ಹೊಟೇಲಿನ ಕೊಳಚೆ ನೇರವಾಗಿ ಸಮುದ್ರಕ್ಕೆ ಸೇರುತ್ತದೆ. ಇದೇ ಕಡಲ ತೀರ ಕಪ್ಪಾಗಲು ಮುಖ್ಯ ಕಾರಣ.
`ಗ್ರಾಮ ಮಟ್ಟದಲ್ಲಿ ಕೊಳೆ ನೀರಿನ ನಿರ್ವಹಣೆ. ಪ್ರವಾಸಿಗರ ಜೊತೆ ಸ್ಥಳೀಯರಿಗೂ ಕಸ ವಿಲೇವಾರಿ ಬಗ್ಗೆ ಜಾಗೃತಿ ಹಾಗೂ ಪರಿಸರ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ನಿಸರ್ಗವನ್ನು ಸುಂದರವಾಗಿರಿಸಿಕೊಳ್ಳು ಸಾಧ್ಯ’ ಎಂಬುದು ಈಚೆಗೆ ಗೋಕರ್ಣಕ್ಕೆ ಭೇಟಿ ನೀಡಿದ್ದ ಶಿರಸಿಯ ಆಯುರ್ವೇದ ವೈದ್ಯ ಡಾ ರವಿಕಿರಣ ಪಟವರ್ಧನ ಅವರ ನಿಲುವು. `ಕಡಲತೀರ ಸ್ವಚ್ಛತೆ ಕಾಣೆಯಾಗಿದ್ದರಿಂದ ಪವಿತ್ರ ತೀರ್ಥಕ್ಷೇತ್ರದ ಪ್ರಕೃತಿ ಶಕ್ತಿ ಮಾಯವಾಗಿದೆ. ಪ್ರವಾಸೋದ್ಯಮದ ಭರವಸೆ ಸಹ ಸವಾಲಿನಲ್ಲಿದೆ. ಈ ಪರಿಸ್ಥಿತಿಯನ್ನು ತಕ್ಷಣ ಗಂಭೀರವಾಗಿ ಪರಿಗಣಿಸಬೇಕು’ ಎಂಬುದು ಡಾ ರವಿಕಿರಣ ಪಟವರ್ಧನ ಅವರ ಹಕ್ಕೊತ್ತಾಯ.
