ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಓ ಎಸ್ ಜಿ ಗ್ರೂಪ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಓ ಎಸ್ ಜಿ ಗ್ರೂಪ್ ಅಧ್ಯಕ್ಷ ಪವನ ಸಾವಂತ ಅವರು ಸನ್ಮಾನಿಸಿದರು. ನಂತರ ಮಾತನಾಡಿದ ಅವರು ‘ಗ್ರಾಮೀಣ ಭಾಗದ ಮಕ್ಕಳಿಗೆ ಅಸ್ನೋಟಿಯ ಶಿವಾಜಿ ಮಂದಿರದಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಗುಣಮಟ್ಟದ ಶಿಕ್ಷಣದ ಪರಿಣಾಮ ಇಲ್ಲಿ ಕಲಿತ ಮಕ್ಕಳು ಸಾಧನೆ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು. ‘ಕಳೆದ ಮೂರು ವರ್ಷಗಳಿಂದ ಸಾಧಕ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದು, ಇನ್ಮುಂದೆಯೂ ಉತ್ತಮ ಫಲಿತಾಂಶಪಡೆಯುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ’ ಎಂದು ಘೋಷಿಸಿದರು.
ಓ ಎಸ್ ಜಿ ಗ್ರೂಪ್ ಕಾರ್ಯದರ್ಶಿ ಎನ್ ಜಿ ನಾಯ್ಕ ಅವರು ಮಾತನಾಡಿ ‘ಶಿಕ್ಷಣವೇ ಅಭಿವೃದ್ಧಿಯ ಮೂಲಾಧಾರ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಸಂಸ್ಥೆ ಉದ್ದೇಶ’ ಎಂದರು.
ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಕಾಂತ ಪೆಡ್ನೇಕರ ಹಾಗೂ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಪ್ರಮೀಳಾ ಪವಾರ ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳಾದ ಮಾಯಾ ನಾಯ್ಕ, ದೀಪಿಕಾ ನಾಯ್ಕ, ಚೈತ್ರಾ ಎಲ್ಲೇಕರ ಹಾಗೂ ಶರದ್ ಬಾಂದೋಲ್ಕರ್,ಚಂದನ್ ಕೊಳಂಬಕರ, ರೋಶನ್ ಪೆಡ್ನೇಕರ ಅವರಿಗೆ ನಗದು ಹಣ ನೀಡಿ ಗೌರವಿಸಲಾಯಿತು. ಶಿಕ್ಷಕಿ ರೂಪಾಲಿ ಸಾವಂತ ಸ್ವಾಗತಿಸಿ, ನಿರ್ವಹಿಸಿದರು.
