ಯಲ್ಲಾಪುರದಲ್ಲಿ ಕಳೆದ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ಅವ್ಯವಹಾರ ನಡೆದಿದ್ದು, ಅಕ್ರಮದ ತನಿಖೆಗೆ ಆಗ್ರಹಿಸಿದಾಗ ಕಣ್ಮರೆಯಾಗಿದ್ದ ಪೆನಡ್ರೈವ್ ಇದೀಗ ಸಿಕ್ಕಿದ ಮಾಹಿತಿ ದೊರೆತಿದೆ. ಹೀಗಾಗಿ ಮುಂದಿನ ಸಭೆಯಲ್ಲಿ ಪೆನ್ ಡ್ರೈವ್’ನಲ್ಲಿದ್ದ ಎಲ್ಲಾ ಅಂಶಗಳ ಬಗ್ಗೆ ಚರ್ಚೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಆಗ್ರಹಿಸಿದ್ದಾರೆ.
ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಈ ಹಿಂದೆ ನಡೆದ 8 ಸಭೆಗಳು ಜಾತ್ರೆ ಅವ್ಯವಹಾರ ಹಾಗೂ ಮೀನು ಮಾರುಕಟ್ಟೆಯನ್ನು ಸುತ್ತುವರೆದಿತ್ತು. ಐದನೇ ಸಭೆಯಲ್ಲಿ ಪೆನ್ ಡ್ರೈವ್ ರಹಸ್ಯದ ಬಗ್ಗೆ ಚರ್ಚೆ ನಡೆದಿದ್ದು, ಜಾತ್ರಾ ಅವಧಿಯಲ್ಲಿ ಜಾಗ ಹರಾಜುನಡೆಸಿದ ವಿಡಿಯೋ ಚಿತ್ರಿಕರಣದ ದಾಖಲೆ ಆ ಪೆನ್ ಡ್ರೈವ್ ಒಳಗೊಂಡ ಮಾಹಿತಿ ಬಹಿರಂಗವಾಗಿತ್ತು. ಆದರೆ, ಈ ವೇಳೆ ಪೆನ್ ಡ್ರೈವ್ ಕಾಣೆಯಾಗಿರುವ ಬಗ್ಗೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. `ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಪೆನ್ ಡ್ರೈವ್ ನೀಡಿದ್ದೇನೆ’ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳಿದ್ದರು. ಆದರೆ, ಸೋಮೇಶ್ವರ ನಾಯ್ಕ ಅದನ್ನು ನಿರಾಕರಿಸಿದ್ದರು. ಅದಾದ ನಂತರ ಅನೇಕ ಸದಸ್ಯರು ಪೆನ್ ಡ್ರೈವ್ ಬಗ್ಗೆ ಪ್ರಶ್ನಿಸಿದ್ದರು.
ಇದೀಗ ಕಾಣೆಯಾಗಿದ್ದ ಪೆನ್ ಡ್ರೈವ್ ಸಿಕ್ಕಿದೆ. ಈ ಹಿನ್ನಲೆ ಸೋಮೇಶ್ವರ ನಾಯ್ಕ ಅವರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. `ಸರ್ವ ಸದಸ್ಯರ ಸಮ್ಮುಖದಲ್ಲಿ ಪೆನ್ ಡ್ರೈವ್ ಮಾಹಿತಿ ಬಹಿರಂಗಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬೇಕು’ ಎಂದವರು ಒತ್ತಾಯಿಸಿದ್ದಾರೆ.
ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಿoದ ವ್ಯಾಪಾರಿ ಮಳಿಗೆಗಳ ಜಾಗ ಹರಾಜು ಹಾಕಲಾಗಿದ್ದು, ನಿಜವಾಗಿಯೂ ಹರಾಜಾದ ಮೊತ್ತ ಹಾಗೂ ಪಟ್ಟಣ ಪಂಚಾಯತ ಖಜಾನೆಗೆ ಬಂದ ಮೊತ್ತದ ನಡುವೆ ವ್ಯತ್ಯಾಸ ಕಾಣಿಸಿದ್ದರಿಂದ ಈ ಹಗರಣ ಹೊರ ಬಂದಿತ್ತು. ಹರಾಜು ನಡೆದ ದಿನ ವಿಡಿಯೋ ಚಿತ್ರಿಕರಣ ನಡೆದಿದ್ದು, ಅದನ್ನು ಪೆನ್ಡ್ರೆöÊವ್ ಮೂಲಕ ಕಾಯ್ದಿರಿಸಲಾಗಿತ್ತು.
ಒಟ್ಟು 13 ಲಕ್ಷ ರೂ ಅವ್ಯವಹಾರ ನಡೆದ ಬಗ್ಗೆ ಪ್ರಾಥಮಿಕ ಮಾಹಿತಿಯಿದ್ದು, ಸಂಪೂರ್ಣ ತನಿಖೆ ನಂತರ ಇನ್ನಷ್ಟು ವಿಚಾರ ಹೊರಬರುವ ಸಾದ್ಯತೆಯಿದೆ.
