ಕಾರವಾರದ ಮಾರುತಿ ದೇವಸ್ತಾನ ಬಳಿಯ ವಿಲ್ಸನ್ ಫನಾಂಡಿಸ್ ಅವರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಉತ್ತರ ಕನ್ನಡ ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು 40ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ ವ್ಯಕ್ತಿ ಇದೀಗ ಜೈಲು ಸೇರಿದ್ದು, ವಿಚಾರಣೆ ಮುಂದುವರೆದಿದೆ.
ಬಿಹಾರ ರಾಜ್ಯದ ಹರ್ದೀಪ ಸಿಂಗ್ ಎಂಬಾತರು ಪೊಲೀಸ್ ವೇಷ ಧರಿಸಿ ಅವರಿಗೆ ಫೋನ್ ಮಾಡುತ್ತಿದ್ದರು. ವಿಡಿಯೋ ಕಾಲ್ ಮಾಡಿ `ನೀವು ಕಳುಹಿಸಿದ ಕೋರಿಯರ್ ಒಳಗೆ ಮಾದಕ ವ್ಯಸನವಿದೆ. ನಿಮ್ಮನ್ನು ಇದೀಗ ಬಂಧಿಸಲಾಗುತ್ತದೆ’ ಎಂದು ಹೆದರಿಸುತ್ತಿದ್ದರು. ಅದಾದ ನಂತರ ರಾಜಿ-ಸಂದಾನ ನಡೆಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಡಿಜಿಟಲ್ ಅರೆಸ್ಟ್’ಗೆ ಹೆದರಿದ ಜನ ನಕಲಿ ಪೊಲೀಸ್ ಅಧಿಕಾರಿ ಖಾತೆಗೆ ಹಣ ಹಾಕುತ್ತಿದ್ದರು.
ನಕಲಿ ಪಾಸ್ ಪೋರ್ಟ, ನಕಲಿ ವಿಸಾ ಎಂದು ಹೇಳಿದ ಕಾರಣ ಹೆದರಿದ ಕಾರವಾರದ ವಿಲ್ಸನ್ ಫರ್ನಾಂಡಿಸ್ ಸಹ ವಂಚಕರ ಖಾತೆಗೆ ಹಣ ಹಾಕಿ ಮೋಸ ಹೋಗಿದ್ದರು. 380100ರೂ ಕಾಣೆಯಾದ ಬಗ್ಗೆ ಅವರ ಅಣ್ಣ ರಾಫೆಲ್ ಮ್ಯಾಥೂವ್ಸ ಪೊಲೀಸ್ ದೂರು ನೀಡಿದ್ದರು. ಪ್ರಕರಣದ ಬೆನ್ನುಬಿದ್ದ ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಬಿ ಅಶ್ವಿನಿ ಬಿಹಾರದಲ್ಲಿ ಅಡಗಿದ್ದ ಹರ್ದೀಪ ಸಿಂಗ್’ರನ್ನು ಹಿಡಿದರು. ಅಂಕೋಲಾ ಪಿ ಎಸ್ ಐ ಉದ್ದಪ್ಪ ಧರಪ್ಪನವರ್ ಹಾಗೂ ಪೊಲೀಸ್ ಸಿಬ್ಬಂದಿ ನಾಮದೇವ ನಾಂದ್ರೆ ಸೇರಿ ಆ ಭೂಪನನ್ನು ಬಂಧಿಸಿದರು.
ಈ ಹರ್ದೀಪ ಸಿಂಗ್ ದೇಶದ 29 ಕಡೆ ಸೈಬರ್ ವಂಚನೆ ಮಾಡಿದ್ದು, ತಮಿಳುನಾಡಿನಲ್ಲಿ 9 ಕೋಟಿ, ಆಂದ್ರಪ್ರದೇಶದಲ್ಲಿ 2.47 ಕೋಟಿ ಹಗರಣ ನಡೆಸಿರುವುದು ಗೊತ್ತಾಯಿತು. ಬೆಂಗಳೂರಿನಲ್ಲಿ ಸಹ 80 ಲಕ್ಷ ರೂ ವಂಚಿಸಿದ್ದರು. ಒಟ್ಟು ಒಟ್ಟು 40 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಆತ ಭಾಗಿಯಾಗಿರುವುದನ್ನು ಟೆಕ್ನಿಕಲ್ ಸೆಲ್ ವಿಭಾಗದ ಉದಯ ಗುನಗಾ, ಬಬನ ಕದಂ ಪತ್ತೆ ಮಾಡಿದರು. ತಮ್ಮ ವರ್ಗಾವಣೆಗೂ ಮುನ್ನ ಇನ್ನೊಂದು ದೊಡ್ಡ ಪ್ರಕರಣ ಬೇದಿಸಿದ ಸಂತಸದಲ್ಲಿರುವ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅಧೀನ ಅಧಿಕಾರಿಗಳ ಕಾರ್ಯ ಶ್ಲಾಘಿಸಿದರು. ಪೊಲೀಸ್ ಉಪಾಧ್ಯಕ್ಷ ಜಗದೀಶ ಅವರು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿದರು.
