ಯಲ್ಲಾಪುರ ಹಾಗೂ ದಾಂಡೇಲಿ ಪ್ರವಾಸಕ್ಕೆ ಬಂದು ಮೋಜು-ಮಸ್ತಿಯಲ್ಲಿ ತೊಡಗಿದ್ದ ವೇಳೆ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರವಾಸಿತಾಣದಿಂದ ಜೀವ ಉಳಿಸಿಕೊಂಡು ಬಂದಿದ್ದರೂ ಅತಿಯಾದ ಮೋಜು-ಮಸ್ತಿ ಕಾರಣಕ್ಕಾಗಿ ಅವರು ನ್ಯಾಯಾಲಯ ಅಲೆದಾಟ ನಡೆಸುವುದು ಅನಿವಾರ್ಯವಾಗಿದೆ.
ಈಚೆಗೆ ಯಲ್ಲಾಪುರದ ಅರಬೈಲ್ ಜಲಪಾತದಲ್ಲಿ ಪ್ರವಾಸಿಗರು ಅಪಾಯಕ್ಕೆ ಸಿಲುಕಿದ್ದ ವಿಡಿಯೋ ವೈರಲ್ ಆಗಿತ್ತು. ಅಪಾಯದ ಬಗ್ಗೆ ಅರಿವಿದ್ದದ್ದರೂ ಜಲಪಾತದ ಬಳಿ ದುಸ್ಸಾಹಸ ನಡೆಸಿದ ಪರಿಣಾಮ ಹುಬ್ಬಳ್ಳಿಯ ಜನ ಆತಂಕ ಎದುರಿಸಿದ್ದರು. ಸ್ಥಳೀಯರು ಅವರನ್ನು ರಕ್ಷಿಸಿದರಾದರೂ ಪ್ರವಾಸಿಗರ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಸೆಲ್ಪಿ ಹಾಗೂ ರೀಲ್ಸ ಹುಚ್ಚಿಗೆ ಪ್ರವಾಸಿಗರು ಅಪಾಯದ ಸ್ಥಳಕ್ಕೆ ಹೋಗಿರುವುದು ಗೊತ್ತಾಗಿದೆ.
ಮಳೆಗಾಲದ ಹಿನ್ನಲೆ ಎಲ್ಲಡೆ ಜಲ ಸಾಹಸ ಚಟುವಟಿಕೆ ನಿಷೇಧಿಸಲಾಗಿದ್ದು, ಈ ನಿಯಮ ದಾಂಡೇಲಿಗೆ ಸಹ ಅನ್ವಯ. ಅದಾಗಿಯೂ ಪ್ರವಾಸಿಗರು ದಾಂಡೇಲಿಯಲ್ಲಿ ಜಲ ಸಾಹಸ ಚಟುವಟಿಕೆ ಮಾಡಿದ್ದರು. ಆ ಮೂಲಕ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿದ್ದರು. ವಿಚಾರಣೆ ನಡೆಸಿದಾಗ ಇಳವಾ ಗ್ರಾಮದಲ್ಲಿ ಜಟ್ಟಿ ಮಾಲಕರು ತಮ್ಮ ಲಾಭಕ್ಕಾಗಿ ಪ್ರವಾಸಿಗರನ್ನು ರಾಪ್ಟಿಂಗ್’ಗೆ ಕರೆದೊಯ್ದಿರುವುದು ಗೊತ್ತಾಯಿತು.
ಈ ಎರಡು ಕಾರಣದಿಂದ ಪೊಲೀಸರು ಆಪಾದಿತರ ಮೇಲೆ ಪ್ರಕರಣ ದಾಖಲಿಸಿಕೊಂಡರು. ರಾಪ್ಟಿಂಗ್ ಕುರಿತು ರಾಮನಗರದಲ್ಲಿ ಹಾಗೂ ಜಲಪಾತದ ಅಪಾಯದ ಕುರಿತು ಯಲ್ಲಾಪುರದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.
