ಯಾವುದೇ ಸುರಕ್ಷತೆ ಇಲ್ಲದ ಉದ್ದದ ಕಬ್ಬಿಣದ ಪೈಪು ಸಾಗಾಟದ ಪರಿಣಾಮ ಸಿದ್ದಾಪುರದ ಬೈಕ್ ಸವಾರೊಬ್ಬರು ಸಾವನಪ್ಪಿದ್ದಾರೆ. ಬೈಕ್ ಬಡಿದು ಗಾಯಗೊಂಡಿದ್ದ ರಾಮಕೃಷ್ಣ ಅಪ್ಪಿನಬೈಲ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.
2025ರ ಜುಲೈ 17ರ ಸಂಜೆ ಸಿದ್ದಾಪುರ ಅಪ್ಪಿನಬೈಲಿನ ರಾಮಕೃಷ್ಣ ಅವರು ಪುಟ್ಟಪ್ಪ ಅಪ್ಪಿನಬೈಲ್ ಅವರ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ರಾಮಕೃಷ್ಣ ಅವರು ಬೈಕ್ ಓಡಿಸುತ್ತಿದ್ದರು. ಶಿರಸಿ ಜೋಗ ರಸ್ತೆಯ ಹೊಸೂರು ಜೀವನ ಎಜನ್ಸಿ ಅಂಗಡಿ ಬಳಿ ಆ ಬೈಕ್ ತೆರಳುತ್ತಿದ್ದಾಗ ಉದ್ದನೆಯ ಜಿಯೋ ಕಬ್ಬಿಣದ ಪೈಪ್ ಅವರ ತಲೆಗೆ ಬಡಿಯಿತು. ಬೈಕಿನಿಂದ ಬಿದ್ದ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಸಿದ್ದಾಪುರ ಹೊಸೂರಿನ ಜೀವನ ಎಜನ್ಸಿ ಅಂಗಡಿಯ ರವಿ ಗೌಡ ಹೊನ್ನಗೋಡ, ಸುರೇಶ ಚೌಡ ಗೌಡ ಬಿಳೆಗೋಡ ಹಾಗೂ ಕುಮಾರ ಬೋವಿ ಸೇರಿ ತಮ್ಮ ಮಳಿಗೆಯಲ್ಲಿದ್ದ ಪೈಪನ್ನು ಅಸುರಕ್ಷಿತ ವಿಧಾನದಲ್ಲಿ ಸಾಗಿಸುತ್ತಿದ್ದರು. ಕತ್ತಲೆಯ ದಾರಿಯಲ್ಲಿ ಬೆಳಕನ್ನು ಸಹ ಹಾಕಿಕೊಳ್ಳದೇ ಅವರು ಸಾಗಿಸುತ್ತಿದ್ದು, ಆ ಪೈಪ್ ಬಡಿದ ಕಾರಣ ರಾಮಕೃಷ್ಣ ಅಪ್ಪಿನಬೈಲ್ ಅವರು ಸಾವನಪ್ಪಿದರು.
ರಾಮಕೃಷ್ಣ ಅಪ್ಪಿನಬೈಲ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೇ, ಜುಲೈ 18ರಂದು ಅವರು ಕೊನೆ ಉಸಿರೆಳೆದರು. ಸಿದ್ದಾಪುರ ಪೊಲೀಸರು ಎಜನ್ಸಿ ಮಾಲಕ ಕುಮಾರ ಬೋವಿ ಜೊತೆ ಪೈಪ್ ಸಾಗಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಿದರು.
