`ಯಲ್ಲಾಪುರ ತಾಲೂಕು ಆಸ್ಪತ್ರೆಯ ವೈದ್ಯ ಡಾ ದೀಪಕ ಭಟ್ಟ ಅವರ ವರ್ಗಾವಣೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರ ನಿರ್ಲಕ್ಷ್ಯ ಕಾರಣ’ ಎಂದು ಬಿಜೆಪಿ ದೂರಿದೆ. ಡಾ ದೀಪಕ ಭಟ್ಟ ಅವರನ್ನು ಉಳಿಸಿಕೊಳ್ಳಲು ತಾಂತ್ರಿಕ ಕಾರಣಗಳಿದ್ದರೂ ಅದನ್ನು ಬಳಸಲಾಗಿಲ್ಲ’ ಎಂದು ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಜಂಟಿಯಾಗಿ ದೂರಿದ್ದಾರೆ.
`ಹೊಸ ವೈದ್ಯರು ಆಸ್ಪತ್ರೆಗೆ ಬಂದರೆ ಮಾತ್ರ ಈಗಿರುವ ವೈದ್ಯರನ್ನು ಬಿಡುಗಡೆ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಹೊಸ ವೈದ್ಯರ ಆಗಮನಕ್ಕೂ ಮುನ್ನ ಡಾ ದೀಪಕ ಭಟ್ಟ ಅವರು ಯಲ್ಲಾಪುರ ಆಸ್ಪತ್ರೆಯಿಂದ ವರ್ಗವಾಗಿದ್ದಾರೆ’ ಎಂದು ಪ್ರಸಾದ ಹೆಗಡೆ ಅಸಮಧಾನವ್ಯಕ್ತಪಡಿಸಿದರು. `ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಭಟ್ಟ ದಂಪತಿ ಒಂದೇ ಕಡೆ ಕೆಲಸ ಮಾಡಲು ಕಾನೂನಿನ ಅಡಿ ಅವಕಾಶವಿದೆ. ಸರ್ಕಾರದ ಮುಂದೆ ಈ ತಾಂತ್ರಿಕ ಕಾರಣ ಪ್ರಸ್ತುತಪಡಿಸಿದರೆ ಡಾ ದೀಪಕ ಭಟ್ಟ ಅವರು ಇಲ್ಲಿಯೇ ಸೇವೆ ಮುಂದುವರೆಸಲು ಅವಕಾಶವಿದ್ದು, ಶಾಸಕರು ಅದನ್ನು ಬಳಸಿಕೊಳ್ಳಲಿಲ್ಲ’ ಎಂದು ಹರಿಪ್ರಕಾಶ ಕೋಣೆಮನೆ ಕಿಡಿಕಾರಿದ್ದಾರೆ.
`ಸರಿಯಾಗಿದ್ದ ಆಸ್ಪತ್ರೆಯನ್ನು ಶಾಸಕರು ಹಾಳು ಮಾಡಬಾರದು’ ಎಂದು ಹರಿಪ್ರಕಾಶ ಕೋಣೆಮನೆ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಕಿವಿಮಾತು ಹೇಳಿದ್ದಾರೆ. `ವೈದ್ಯರ ವರ್ಗಾವಣೆ ವಿಷಯದಲ್ಲಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಯಲ್ಲಾಪುರಕ್ಕೆ ಹೆರಿಗೆ ತಜ್ಞರ ನೇಮಕಾತಿನಡೆಯಬೇಕು’ ಎಂದು ಪ್ರಸಾದ ಹೆಗಡೆ ಆಗ್ರಹಿಸಿದ್ದಾರೆ.
ಇದರೊಂದಿಗೆ `ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಕಾಂಗ್ರೆಸ್ ಸರ್ಕಾರ ಬಿಟ್ಟಿ ಪ್ರಚಾರಕ್ಕಾಗಿ ಜನರ ಜೀವದ ಜೊತೆ ಆಟವಾಡಿದೆ. ಕಾಲ್ತುಳಿದಲ್ಲಿ ಸಿಲುಕಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂ ಪರಿಹಾರ ನೀಡಬೇಕು’ ಎಂದು ಬಿಜೆಪಿಗರು ಆಗ್ರಹಿಸಿದ್ದಾರೆ. ಗ್ರಾ ಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಗಣೇಶ ಹೆಗಡೆ, ಬಿಜೆಪಿಯ ಉಮೇಶ ಭಾಗ್ವತ, ಗೋಪಾಲಕೃಷ್ಣ ಗಾಂವ್ಕರ, ರಾಘವೇಂದ್ರ ಭಟ್ಟ, ಪ್ರೇಮಕುಮಾರ ನಾಯ್ಕ ಹಾಗೂ ಕೆಟಿ ಹೆಗಡೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರದ ನಿಲುವು ಖಂಡಿಸಿದರು.
