ಗ್ರಾಮದೇವಿ ದೇವಸ್ತಾನದ ಬಳಿಯಿರುವ 4-5 ಮನೆಯಲ್ಲಿ ಕಳ್ಳತನ ನಡೆದಿದ್ದು, ಎರಡು ಮನೆಯವರು ಮಾತ್ರ ಪೊಲೀಸ್ ದೂರು ನೀಡಿದ್ದಾರೆ. ಉಳಿದವರು ದೂರು ನೀಡಲು ಹಿಂದೇಟು ಹಾಕಿದ್ದಾರೆ!
ಇಬ್ಬರು ಮಹಿಳೆಯರು ಮಾತ್ರ ಧೈರ್ಯವಾಗಿ ಪೊಲೀಸ್ ಠಾಣೆಗೆ ಬಂದು ಕಳ್ಳರ ವಿರುದ್ಧ ದೂರು ನೀಡಿದ್ದಾರೆ. ಆ ಕಳ್ಳರನ್ನು ಹಿಡಿದು ತಮ್ಮ ಆಭರಣ ಮರಳಿಸಿ ಎಂದು ಪೊಲೀಸರ ಬಳಿ ಒತ್ತಾಯಿಸಿದ್ದಾರೆ. ಜುಲೈ 17ರ ರಾತ್ರಿ ದೇವಿದೇವಸ್ಥಾನ ರಸ್ತೆಗೆ ಕಳ್ಳರು ಆಗಮಿಸಿದ್ದರು. ಅವರು ಅಲ್ಲಿನ ಅನೇಕ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ್ದರು. ಮಾಹಿತಿಗಳ ಪ್ರಕಾರ ಅಲ್ಲಿನ ಕೈಸರೆ, ಗುಡಿಗಾರ ಮನೆಗಳಿಗೂ ಕಳ್ಳರು ನುಗ್ಗಿದ್ದರು. ಆದರೆ, ಆ ಮನೆಯವರು ದೂರು ನೀಡಲಿಲ್ಲ.
ಸದ್ಯ ಶಿಕ್ಷಕಿ ಸುಮಂಗಲಾ ನಾಯ್ಕ ಹಾಗೂ ಅಲ್ಲಿನ ಅನುರಾಧ ಹಿರೇಮಠ್ ಮಾತ್ರ ಪೊಲೀಸರ ಮೊರೆ ಹೋಗಿದ್ದಾರೆ. ಮನೆ ಬಾಗಿಲು ಮುರಿದು ಕಳ್ಳರು ಒಳಗೆ ನುಗ್ಗಿದ ಬಗ್ಗೆ ಅವರು ವಿವರಿಸಿದ್ದಾರೆ. ಸುಮಂಗಲಾ ನಾಯ್ಕ ಅವರು ತಮ್ಮ ಮನೆಯಲ್ಲಿದ್ದ 1.17 ಲಕ್ಷ ರೂ ಮೌಲ್ಯದ ಆಭರಣ ಕಳ್ಳತನ ನಡೆದಿರುವ ಬಗ್ಗೆ ಹೇಳಿದ್ದಾರೆ. ಅನುರಾಧ ಹೀರೆಮಠ್ ಅವರು 2.18 ಲಕ್ಷ ರೂ ಮೌಲ್ಯದ ಆಭರಣ ಕಣ್ಮರೆಯಾದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಈ ಎರಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಹುಡುಕಾಟ ನಡೆಸಿದ್ದಾರೆ. `ಉಳಿದ ಕೆಲ ಮನೆಗಳಿಗೆ ಕಳ್ಳರು ನುಗ್ಗಿದರೂ ಏನನ್ನು ಕದ್ದಿಲ್ಲ. ಹೀಗಾಗಿ ಅವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂಬ ಮಾಹಿತಿ ಸಿಕ್ಕಿದೆ.
