ಯಲ್ಲಾಪುರ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಹಣಕಾಸಿನ ಅವ್ಯವಹಾರ ವಿಷಯದಲ್ಲಿ ಹೋರಾಟ ನಡೆಸುತ್ತಿರುವ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅವರಿಗೆ ಸ್ವಪಕ್ಷದವರಿಂದಲೇ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಅವರು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
`ಭಾರತೀಯ ಜನತಾ ಪಕ್ಷದ ಎಲ್ಲಾ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಿ’ ಎಂದು ಸೋಮೇಶ್ವರ ನಾಯ್ಕ ಹೇಳಿದ್ದಾರೆ. `ಜಾತ್ರೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ತಾನು ಧ್ವನಿ ಎತ್ತಿದ್ದೇನೆ. ಆದರೆ, ಈ ವಿಷಯದಲ್ಲಿ ಬಿಜೆಪಿಗರು ಸಹಕಾರ ನೀಡುತ್ತಿಲ್ಲ. ಸ್ವಪಕ್ಷದವರಿಂದಲೇ ಕುತಂತ್ರ ರಾಜಕಾರಣ ನಡೆದಿದೆ. ಅನಗತ್ಯವಾಗಿ ತನ್ನ ವಿರುದ್ಧವೇ ಆರೋಪ ಮಾಡಲಾಗುತ್ತಿದೆ’ ಎಂದು ಸೋಮೇಶ್ವರ ನಾಯ್ಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ಜಾತ್ರೆ ಅವ್ಯವಹಾರ ವಿಷಯದಲ್ಲಿ ಕಾನೂನು ಹೋರಾಟ ನಡೆಸಲು ತಾನು ಸಿದ್ಧ. ಸಂಘಟನೆ ಮೂಲಕ ಈ ವಿಚಾರದಲ್ಲಿ ಮುನ್ನುಗ್ಗಲಿದ್ದು, ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅಲ್ಲಿನವರ ಭ್ರಷ್ಟಾಚಾರ ಬಹಿರಂಗಪಡಿಸುವುದು ಕಷ್ಟ. ಹೀಗಾಗಿ ಬಿಜೆಪಿಯ ಎಲ್ಲಾ ಜವಾಬ್ದಾರಿಯಿಂದ ತಮ್ಮನ್ನು ಮುಕ್ತಗೊಳಿಸಿ’ ಎಂದು ಬರೆದಿದ್ದಾರೆ.
ಕೊನೆಯದಾಗಿ `ತಮ್ಮನ್ನು ಕ್ಷಮಿಸಿ’ ಎಂದು ಬರೆದಿರುವ ಪತ್ರವನ್ನು ಅವರು ಹರಿಬಿಟ್ಟಿದ್ದಾರೆ.
