ಅoಕೋಲಾದ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರುವಿಗೆ ಮೀನುಗಾರರ ವಿರೋಧ ಮುಂದುವರೆದಿದೆ. ಸ್ಥಳೀಯರ ಜೊತೆ ಮೀನುಗಾರರನ್ನು ವಿಶ್ವಾಸಕ್ಕೆಪಡೆಯುವಲ್ಲಿ ಗುತ್ತಿಗೆಪಡೆದ JSW ಕಂಪನಿ ವಿಫಲವಾಗಿದೆ.
ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೀನುಗಾರರು ಮಂಗಳವಾರ ಬಂದರು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಹೋರಾಟದ ಭಾಗವಾಗಿ ಮೀನು ಮಾರುಕಟ್ಟೆಯಲ್ಲಿನ ವ್ಯಾಪಾರ ಬಂದ್ ಮಾಡಿ ಆಕ್ರೋಶವ್ಯಕ್ತಪಡಿಸಿದ್ದಾರೆ. `ಮೀನುಗಾರಿಕೆಗೆ ಸಿಕ್ಕಿರುವ ಸಮುದ್ರ ತೀರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸದಿರಿ’ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದು, ವಾಣಿಜ್ಯ ಬಂದರು ವಿರುದ್ಧ ಇನ್ನಷ್ಟು ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮೀನು ಮಾರಾಟ ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಂದರು ವಿರುದ್ಧ ಘೋಷಣೆ ಕೂಗಿದರು. `ವಾಣಿಜ್ಯ ಚಟುವಟಿಕೆಗಳಿಗಾಗಿ ಮೀನುಗಾರರ ಬದುಕು ಕಿತ್ತುಕೊಳ್ಳುವ ಯೋಜನೆ ನಮಗೆ ಬೇಡ’ ಎಂದು ಒಕ್ಕೂರಲಿನಿಂದ ಆಗ್ರಹಿಸಿದರು. `ಬಂದರು ಬರುವುದರಿಂದ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬರುತ್ತದೆ. ಮೀನುಗಾರರ ಜೀವನಕ್ಕೆ ಇದು ಮಾರಕ’ ಎಂದು ವಿವರಿಸಿದರು.
ಪ್ರತಿಭಟನೆ ಬಗ್ಗೆ ಅರಿವಿಲ್ಲದೇ ಅನೇಕರು ಮೀನು ಖರೀದಿಗೆ ಆಗಮಿಸಿದ್ದು, ಅವರಿಗೂ ಮೀನುಗಾರ ಮಹಿಳೆಯರು ಪ್ರತಿಭಟನೆಯ ಉದ್ದೇಶ ವಿವರಿಸಿದರು. ಜೊತೆಗೆ ಮೀನು ಗ್ರಾಹಕರಿಂದಲೂ ಬೆಂಬಲಪಡೆದರು. ವಾಣಿಜ್ಯ ಬಂದರು ಬಂದರೆ ಭವಿಷ್ಯದಲ್ಲಿ ಮೀನಿಗೆ ಬರಗಾಲ ಬರುವ ಬಗ್ಗೆ ಮೀನು ಪ್ರಿಯರಿಗೆ ಅರಿವು ಮೂಡಿಸಿದರು. ಮೀನುಗಾರರು ಅನುಭವಿಸುತ್ತಿರುವ ಸಮಸ್ಯೆ, ಮೀನು ಕೊರತೆ ಹಾಗೂ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಪ್ರತಿಭಟನೆ ಮೂಲಕ ಸರ್ಕಾರದ ಗಮನಸೆಳೆದರು.
