ಪತ್ನಿಯ ಆಧಾರ್ ಕಾರ್ಡಿನಲ್ಲಿ ತನ್ನ ಹೆಸರು ನಮೂದಾಗಿರುವುದಕ್ಕೆ ಆಕ್ಷೇಪವ್ಯಕ್ತಪಡಿಸಿದ ವ್ಯಕ್ತಿಯೊಬ್ಬ ನಡು ರಸ್ತೆಯಲ್ಲಿ ಪತ್ನಿಯ ಕೆನ್ನೆಗೆ ಬಾರಿಸಿದ್ದು, ಗೋಕರ್ಣ ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ.
ಕುಮಟಾ ತಾಲೂಕಿನ ಹನೇಹಳ್ಳಿಯ ಶ್ವೇತಾ ಆಗೇರ್ ಅವರು ನವೀನ ಆಗೇರ್ ಅವರನ್ನು ವರಿಸಿದ್ದರು. ಹನೇಹಳ್ಳಿಯಲ್ಲಿ ವಾಸವಾಗಿದ್ದ ನವೀನ್ ಆಗೇರ್ ನಿತ್ಯವೂ ಪತ್ನಿಯನ್ನು ಪೀಡಿಸುತ್ತಿದ್ದರು. `ತನಗೆ ವಿಚ್ಚೇದನ ಕೊಡು’ ಎಂದು ನವೀನ್ ಆಗೇರ್ ಗಂಟು ಬಿದ್ದಿದ್ದು, ಶ್ವೇತಾ ಆಗೇರ್ ಅವರು ಸುಧಾರಿಸಿಕೊಂಡು ಸಂಸಾರ ನಡೆಸುತ್ತಿದ್ದರು.
ಶ್ವೇತಾ ಆಗೇರ್ ಅವರ ಆಧಾರ್ ಕಾರ್ಡಿನಲ್ಲಿ ತನ್ನ ಹೆಸರಿರುವುದನ್ನು ನವೀನ್ ಆಗೇರ್ ನೋಡಿದ್ದರು. `ಆ ಹೆಸರನ್ನು ತೆಗೆ’ ಎಂದು ಈಚೆಗೆ ಹೊಸದಾಗಿ ಖ್ಯಾತೆ ತೆರೆದಿದ್ದರು. ಆದರೆ, ಶ್ವೇತಾ ಆಗೇರ್ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗ ಜುಲೈ 8ರಂದು ಶ್ವೇತಾ ಆಗೇರ್ ಅವರು ಗೋಕರ್ಣಕ್ಕೆ ಹೋಗಿದ್ದರು.
ಗೋಕರ್ಣದ ಒನ್ ವೇ ಕ್ರಾಸ್ ಬಳಿ ನಡೆದುಹೋಗುತ್ತಿದ್ದಾಗ ಅಲ್ಲಿಗೆ ಬಂದ ನವೀನ್ ಆಗೇರ್ ಆಧಾರ್ ಕಾರ್ಡ ವಿಷಯವಾಗಿ ಜಗಳವಾಡಿದರು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಶ್ವೇತಾ ಆಗೇರ್ ಅವರನ್ನು ಅಡ್ಡಗಟ್ಟಿ ಬೈಗುಳ ಶುರು ಮಾಡಿದರು. ಕೊನೆಗೆ ಸಾರ್ವಜನಿಕವಾಗಿ ಶ್ವೇತಾ ಆಗೇರ್ ಅವರ ಕೆನ್ನೆಗೆ ಬಾರಿಸಿ ಪೌರುಷ ಮೆರೆದರು.
ಇದರಿಂದ ನೊಂದ ಶ್ವೇತಾ ಆಗೇರ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದರು. ಪತಿಯಿಂದಾಗುವ ಹಿಂಸೆ ಬಗ್ಗೆ ಅಲ್ಲಿನ ಪೊಲೀಸರಲ್ಲಿ ಅಳಲು ತೋಡಿಕೊಂಡರು. ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಕಳುಹಿಸಿದ್ದು, ನ್ಯಾಯಾಧೀಶರ ಬಳಿ ಸಮಸ್ಯೆ ಹೇಳಿಕೊಂಡರು. ನ್ಯಾಯಾಧೀಶರ ಸೂಚನೆ ಪ್ರಕಾರ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
