ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕುಮಟಾ ಹಾಗೂ ಹೊನ್ನಾವರ ಭಾಗದಲ್ಲಿ ನದಿ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದೆ.
ಇಲ್ಲಿನ ಶರಾವತಿ ಹಾಗೂ ಅಘನಾಶಿನಿ ನದಿ ಉಕ್ಕಿ ಹರಿದಿದೆ. ಅಪಾಯದ ಮಟ್ಟ ಮೀರಿ ನದಿ ಹರಿದಿದ್ದರಿಂದ ಜನ ತತ್ತರಿಸಿದ್ದಾರೆ. ಪ್ರವಾಹದಿಂದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಹೊನ್ನಾವರದ ಭಾಸ್ಕೇರಿ, ಕವಲಕ್ಕಿ, ಕೆಳಗಿನೂರು, ಕುಮಟಾದ ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ ಸೇರಿ ವಿವಿಧ ಊರುಗಳು ಮುಳುಗಡೆಯಾಗಿದೆ.
ಕೆಳಗಿನೂರಿನ ನಾಗರಾಜ ಮಡಿವಾಳ ಅವರ ಮನೆ ಹಾಗೂ ತೋಟಕ್ಕೆ ನೀರು ನುಗ್ಗಿದೆ. ಮನೆಯಲ್ಲಿದ್ದ ಆಹಾರ ಸಾಮಗ್ರಿಗಳೆಲ್ಲವೂ ನೀರು ಪಾಲಾಗಿದ್ದರಿಂದ ಅವರು ಸಮಸ್ಯೆ ಅನುಭವಿಸುತ್ತಿದ್ದಾರೆ. ವಿದ್ಯುತ್ ಉಪಕರಣಗಳು ಹಾಳಾಗಿವೆ. ಕುಮಟಾ ಊರಕೇರಿ ಬಳಿಯ ಕೆಳಗಿನಕೇರಿಯಲ್ಲಿ 17 ಕುಟುಂಬಗಳು ಅತಂತ್ರವಾಗಿದ್ದು, ಅವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹಿರೇಕಟ್ಟು ಮಜಿರೆಯ ಜನರು ಕಾಳಜಿ ಕೇಂದ್ರ ತಲುಪಿದ್ದಾರೆ. ಹೊನ್ನಾವರದ ಭಾಸ್ಕೇರಿಯಲ್ಲಿನ ಐದು ಕುಟುಂಬಗಳಿಗೂ ಸರ್ಕಾರ ಆಶ್ರಯ ನೀಡಿದೆ.
ಕುಮಟಾ-ಸಿದ್ದಾಪುರ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದೆ. ಭುವನಗಿರಿ ಬಳಿ ಕುಸಿತ ಉಂಟಾಗಿದ್ದರಿAದ ಜನ ಆತಂಕಕ್ಕೆ ಒಳಗಾಗಿದ್ದಾರೆ.
