ಹೊನ್ನಾವರದಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅದೇ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.
ಹೊನ್ನಾವರ ಅನಂತವಾಡಿ ಕಾಸಗೇರಿಯ ಜನಾರ್ಧನ ಮರಾಠಿ (45) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಅನಂತವಾಡಿಯ ಮರಾಠಿಕೇರಿ ಬಳಿ ಅವರು ಗದ್ದೆ ಹೊಂದಿದ್ದು, ಜುಲೈ 25ರಂದು ಗದ್ದೆ ಕೆಲಸಕ್ಕೆ ಹೋಗಿದ್ದರು. ವಿಪರೀತ ಮಳೆ ಸುರಿದ ಪರಿಣಾಮ ಅವರ ಬಳಿ ಅಲ್ಲಿ ಕೆಲಸ ಮಾಡಲು ಆಗಲಿಲ್ಲ. ಹೀಗಾಗಿ ಕೆಲಸ ಅರ್ದಕ್ಕೆ ಬಿಟ್ಟು ಮನೆ ಕಡೆ ಆಗಮಿಸುತ್ತಿದ್ದರು.
ಜನಾರ್ಧನ ಮರಾಠಿ ಅವರು ಮರಾಠಿಕೇರಿಯಿಂದ ಮನೆಗೆ ಬರುವ ದಾರಿಯಲ್ಲಿ ಹಳ್ಳವಿದ್ದು, ಆ ಹಳ್ಳದ ನೀರು ಏಕಾಏಕಿ ಏರಿಕೆಯಾಯಿತು. ಇದರಿಂದ ಅಕ್ಕ-ಪಕ್ಕದ ಭೂಮಿಗೂ ನೀರು ವ್ಯಾಪಿಸಿತು. ನೀರಿನ ಹರಿವು ಒಮ್ಮೆಲೆ ಜಾಸ್ತಿಯಾಗಿದ್ದರಿಂದ ಜನಾರ್ಧನ ಮರಾಠಿ ಅವರು ಹಳ್ಳದಲ್ಲಿ ಕೊಚ್ಚಿ ಹೋದರು. ಆ ಹಳ್ಳದ ನೀರಿನಲ್ಲಿ ಮುಳುಗಿದ ಅವರಿಗೆ ಮೇಲೆ ಏಳಲು ಸಾಧ್ಯವಾಗಲಿಲ್ಲ.
ಅಲ್ಲಿಯೇ ನೀರು ಕುಡಿದು ಅವರು ಸಾವನಪ್ಪಿದರು. ತಂದೆ ಸಾವಿನ ಶೋಕದಲ್ಲಿರುವ ಪಲ್ಲವಿ ಮರಾಠಿ ಅವರು ಈ ಬಗ್ಗೆ ಮಂಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
