ಗಂಡು – ಹೆಣ್ಣು ಜೋಡಿಯಾಗಿ ಮದುವೆ ಆಗುವುದು ಸಾಮಾನ್ಯ. ಆದರೆ, ಗೋಕರ್ಣ ಬಳಿಯ ತಾರಿಮಕ್ಕಿಯಲ್ಲಿ ಮಹಿಳೆಯರಿಬ್ಬರ ನಡುವೆ ಮದುವೆ ನಡೆದಿದೆ!
ಹಾಲಕ್ಕಿ ಸಮುದಾಯದವರು ಗುರುವಾರ ರಾತ್ರಿಯ ಅಮವಾಸ್ಯೆ ಮುಹೂರ್ತದಲ್ಲಿ ಮಹಿಳೆಯೊಬ್ಬರಿಗೆ ಮತ್ತೊಮ್ಮ ಮಹಿಳೆ ನೀಡಿ ಮದುವೆ ಮಾಡಿಸಿದ್ದಾರೆ. ಈ ದಿನ ಸೀತಾ ಗೌಡ ಹಾಗೂ ಸಾವಿತ್ರಿ ಗೌಡ ವಧು-ವರರಾಗಿ ಸಪ್ತಪದಿ ತುಳಿದರು.
ಇಲ್ಲಿ ವರುಣ ದೇವರನ್ನು ಮೆಚ್ಚಿಸುವುದಕ್ಕಾಗಿ ಮಹಿಳೆಯರ ಮದುವೆ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ನಡೆಯುವ ಈ ಮದುವೆ ನೋಡಲು ನೂರಾರು ಜನ ಬರುತ್ತಾರೆ. `ಮಳೆ ಸರಿಯಾಗಿ ಆಗಲಿ’ ಎಂದು ಆ ಭಾಗದವರು ದೇವರನ್ನು ಬೇಡಿಕೊಂಡಿದ್ದು, ತಮ್ಮ ಬೇಡಿಕೆ ಈಡೇರಿದ ಕಾರಣ ಮಹಿಳೆಯರೇ ವಧು-ವರರಾಗಿ ಮದುವೆ ಮಾಡಿಕೊಳ್ಳುತ್ತಾರೆ. ಈ ಮದುವೆಗೆ `ದಾದುಮ್ಮನ ಮದುವೆ’ ಎಂದು ಹೆಸರು.
ಆಷಾಢ ಅಮಾವಾಸ್ಯೆಯ ದಿನ ಸಂಧ್ಯಾಕಾಲದಲ್ಲಿ ಈ ಛಾಯಾ ವಿವಾಹ ಕೇತಕಿ ವಿನಾಯಕ ಮತ್ತು ಕರಿ ದೇವರ ಸನ್ನಿಧಿಯಲ್ಲಿ ಈ ಮದುವೆ ನಡೆದಿದೆ. ಅಲ್ಲಿ ಹರಿಯುತ್ತಿರುವ ಕೊರೆಯ ಆಚೆ – ಈಚೆ ವಧು-ವರರು ನಿಂತು ಹೆಣ್ಣು ಕೇಳುವ ಶಾಸ್ತ್ರ ಮುಗಿಸಿದ್ದು, ಜಾನಪದ ಹಾಡಿನ ಮೂಲಕ ಮದುವೆಗೆ ಶೋಭೆ ತಂದರು.
ಹೆಣ್ಣಿಗೆ ಹೆಣ್ಣು ಒಪ್ಪಿಗೆಯಾದ ನಂತರ ಇಬ್ಬರು ಪರಸ್ಪರ ಮಾಲೆ ಬದಲಿಸಿಕೊಂಡು ಮದುವೆ ಆದರು. ವಿವಾಹ ವಿಧಿ ವಿಧಾನದಲ್ಲಿ ಮಂತ್ರಗಳ ಬದಲು ಜಾನಪದ ಹಾಡು ಕೇಳಿಸಿತು. ವಿವಾಹದ ಎಲ್ಲಾ ಪದ್ಧತಿಯನ್ನು ಇಲ್ಲಿ ನೆರವೇರಿಸಲಾಯಿತು. ನಂತರ ವಧು -ವರರನ್ನು ಹುಳಸೆಕೇರಿ ಗೌಡರ ಮನೆಗೆ ಮೆರವಣಿಗೆ ಮೂಲಕ ಕರೆತಂದು ಧಾರೆ ಶಾಸ್ತ್ರ ನಡೆಸಲಾಯಿತು. ಆಗಮಿಸಿದವರು ವಧು-ವರರಿಗೆ ಉಡುಗರೆ ನೀಡಿ, ಸಿಹಿ ತಿನ್ನಿಸಿದರು.
ಮಳೆ ಬಾರದೇ ಇದ್ದಾಗ ಮಳೆಗಾಗಿ ಹಾಗೂ ಮಳೆ ಹೆಚ್ಚಾದಾಗ ಹಾನಿ ತಪ್ಪಿಸುವುದಕ್ಕಾಗಿ ದಾದಮ್ಮನ ಮದುವೆ ನಡೆಯುತ್ತದೆ. ಅನಾಧಿ ಕಾಲದಿಂದಲೂ ಈ ಆಚರಣೆ ನಡೆದು ಬಂದಿದ್ದು, ಹಾಲಕ್ಕಿ ಸಮುದಾಯದವರು ಭಕ್ತಿಯಿಂದ ಮದುವೆಯಲ್ಲಿ ಭಾಗವಹಿಸುತ್ತಾರೆ. ಈ ಮದುವೆ ಸಂಪೂರ್ಣವಾಗಿ ಮಹಿಳೆಯರಿಂದಲೇ ನಡೆಯಲಿದ್ದು, ಪುರುಷರಿಗೆ ಇಲ್ಲಿ ಕೆಲಸವೇ ಇಲ್ಲ.
