ಮುಂಡಗೋಡಿನ ಕಾತೂರು ಮಾರ್ಗವಾಗಿ ಶಾಲೆಗೆ ಬರುವ ಮಕ್ಕಳೆಲ್ಲರೂ ಒಂದು ದಿನ ತರಗತಿ ಬಹಿಷ್ಕರಿಸಿದ್ದು, ಕಾರಣ ಹುಡುಕಿ ಹೊರಟ ಶಿಕ್ಷಕರಿಗೆ ವಿಚಿತ್ರ ಸಂಗತಿಯೊoದು ಗೊತ್ತಾಗಿದೆ.
ಆ ವಿದ್ಯಾರ್ಥಿಗಳ ಜೊತೆ ಶಾಲೆಗೆ ಬರಬೇಕಿದ್ದ ಹುಡುಗನೊಬ್ಬ ಮರಿ ಪುಡಾರಿಯಾಗಿ ಬದಲಾಗಿದ್ದು, `ಆತನ ಕಾಟದಿಂದ ಮುಕ್ತಿ ಕೊಡಿ’ ಎಂದು ಮಕ್ಕಳು ಅಂಗಲಾಚಿದ್ದಾರೆ.
ಮುoಡಗೋಡಿನ ಕಾತೂರು ಪ್ರೌಢಶಾಲೆಯ ಮಕ್ಕಳು ಶಾಲೆ ಬಹಿಷ್ಕರಿಸಿದ್ದರು. ಯಾವ ವಿದ್ಯಾರ್ಥಿಯೂ ಶಾಲೆಗೆ ಬಾರದ ಕಾರಣ ಶಿಕ್ಷಕರು ಕಾರಣ ಹುಡುಕಿದ್ದರು. ಆಗ, ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಲ್ಲರಿಗೂ ಬೆದರಿಸುತ್ತಿರುವುದು ಬೆಳಕಿಗೆ ಬಂದಿತು. ಪೊಲೀಸರನ್ನು ಶಾಲೆಗೆ ಕರೆಯಿಸಿದ ಶಿಕ್ಷಕರು ಪಾಲಕರ ಸಭೆ ನಡೆಸಿದರು.
ಚಿಪಗೇರಿ ಮಾರ್ಗವಾಗಿ ಬರುವ ಬಸ್ಸಿನಲ್ಲಿ ಬರುವ 8, 9 ಹಾಗೂ 10ನೇ ತರಗತಿಯ 25ಕ್ಕೂ ಅಧಿಕ ವಿದ್ಯಾರ್ಥಿಗಳ ಪಾಲಿಗೆ ಅದೇ ಮಾರ್ಗದಲ್ಲಿ ಬಸ್ಸು ಹತ್ತುವ ವಿದ್ಯಾರ್ಥಿಯೊಬ್ಬ ರೌಡಿಯಾಗಿದ್ದ. ಆತ ಚಾಕು-ಚೂರಿ ಹಿಡಿದು ಶಾಲೆಗೆ ಬರುತ್ತಿದ್ದು, ಇದರಿಂದ ಎಲ್ಲರೂ ಭಯಗೊಂಡಿದ್ದರು. 10ನೇ ತರಗತಿ ಓದುವ ಆ ವಿದ್ಯಾರ್ಥಿ ಅನಗತ್ಯ ಜಗಳ ಮಾಡುವುದು, ಕೆಟ್ಟದಾಗಿ ಬೈಯುವುದನ್ನು ಮಾಡುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರಿಗೆ ದೂರು ನೀಡಿದರು.
`ಆ ವಿದ್ಯಾರ್ಥಿ ಈ ಶಾಲೆಯಲ್ಲಿ ಮುಂದುವರೆಯುವುದಾದರೆ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪೊಲೀಸರು ನಡೆಸಿದ ಸಭೆಯಲ್ಲಿ ಪಾಲಕರು ಹೇಳಿದರು. `ನಮ್ಮ ಮಕ್ಕಳ ವರ್ಗಾವಣೆ ಪತ್ರ ಕೊಡಿ. ನಾವು ಬೇರೆ ಶಾಲೆಗೆ ಕಳುಹಿಸುತ್ತೇವೆ’ ಎಂದು ಒತ್ತಾಯಿಸಿದರು. ಪೊಲೀಸರು ಪಾಲಕರ ಮನವೊಲೈಕೆ ಮಾಡಿದ್ದು, `ಭಯಮುಕ್ತ ವಾತಾರಣ ನಿರ್ಮಿಸದರೆ ಮಾತ್ರ ಶಾಲೆಗೆ ಬರುತ್ತೇವೆ’ ಎಂದು ವಿದ್ಯಾರ್ಥಿಗಳು ಹೇಳಿದರು.
ಕೊನೆಗೆ ಅಸಭ್ಯವಾಗಿ ವರ್ತಿಸುವ ವಿದ್ಯಾರ್ಥಿಯ ಆಪ್ತ ಸಮಾಲೋಚನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಪತ್ರ ಬರೆದರು. ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಭರವಸೆ ನೀಡಿದರು.
Discussion about this post