ಕುಮಟಾದಿಂದ ಶಿರಸಿ ಕಡೆ ಹೋಗುವವರಿಗಾಗಿ ಖಾಸಗಿ ಬಸ್ಸು ಸಂಚಾರ ಶುರುವಾಗಿದ್ದು, ಶಾಸಕ ದಿನಕರ ಶೆಟ್ಟಿ ಅವರ ಸೂಚನೆ ಮೇರೆಗೆ ಈ ಬಸ್ಸಿನ ಪ್ರಯಾಣ ಉಚಿತವಾಗಿದೆ. ಕತಗಾಲದಿಂದ ಮಾಸ್ತಿಹಳ್ಳ ಮಾರ್ಗವಾಗಿ ದೇವಿಮನೆ ಘಟ್ಟದ ತುದಿಯವರೆಗೆ ಈ ಬಸ್ಸಿನ ಮೂಲಕ ಎಲ್ಲರೂ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಶಿರಸಿ ಕುಮಟಾ ರಸ್ತೆಯಲ್ಲಿ ಪದೇ ಪದೇ ಭೂ ಕುಸಿತವಾಗುತ್ತಿರುವುದರಿಂದ ಆ ಮಾರ್ಗವಾಗಿ ಬಸ್ ಓಡಿಸಲು ಕೆಎಸ್ಆರ್ಟಿಸಿ ಚಾಲಕರು ಹೆದರಿದ್ದರು. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಶಾಸಕ ದಿನಕರ ಶೆಟ್ಟಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ರಸ್ತೆ ಅಭಿವೃದ್ಧಿ ಗುತ್ತಿಗೆಪಡೆದ ಆರ್ ಎನ್ ಶೆಟ್ಟಿ ಕಂಪನಿ ಮಾಡಿದ ಅವಾಂತರಗಳಿAದ ಜನ ಸಮಸ್ಯೆ ಎದುರಿಸುತ್ತಿರುವುದನ್ನು ದಿನಕರ ಶೆಟ್ಟಿ ಸ್ಥಳಪರಿಶೀಲನೆ ವೇಳೆ ಗಮನಿಸಿದ್ದರು. ಅದನ್ನು ಈ ಸಭೆಯಲ್ಲಿ ಪ್ರಸ್ತಾಪಿಸಿದರು.
ಗುತ್ತಿಗೆ ಕಂಪನಿಯವರನ್ನು ತರಾಟೆಗೆ ತೆಗೆದುಕೊಂಡ ದಿನಕರ ಶೆಟ್ಟಿ ಕೊನೆಗೆ `ಪ್ರಯಾಣಿಕರ ಅನುಕೂಲಕ್ಕಾಗಿ ಕುಮಟಾ ಕಡೆಯಿಂದ ಕತಗಾಲ ಮಾರ್ಗವಾಗಿ ಶಿರಸಿಗೆ ಹೋಗುವವರಿಗಾಗಿ ಆರ್ ಎನ್ ಶೆಟ್ಟಿ ಗುತ್ತಿಗೆದಾರ ಕಂಪನಿಯವರು ಬಸ್ ಓಡಿಸಬೇಕು’ ಎಂದು ತಾಕೀತು ಮಾಡಿದರು. ಅದರ ಪ್ರಕಾರ ಕತಗಾಲದ ಮಾಸ್ತಿಹಳ್ಳದಿಂದ ಆರ್ ಎನ್ ಶೆಟ್ಟಿ ಗುತ್ತಿಗೆದಾರ ಕಂಪನಿಯವರು ಖಾಸಗಿ ಬಸ್ ವ್ಯವಸ್ಥೆ ಮಾಡಿದರು. `ಎಲ್ಲಾ ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯಬೇಕು’ ಎಂದು ದಿನಕರ ಶೆಟ್ಟಿ ಹೇಳಿದ್ದು, ಅದಕ್ಕೆ ಗುತ್ತಿಗೆ ಕಂಪನಿಯವರು ಒಪ್ಪಿಗೆ ಸೂಚಿಸಿದರು. ಹೀಗಾಗಿ ಸೋಮವಾರದಿಂದ ಆ ಬಸ್ಸಿನ ಸಂಚಾರ ಶುರುವಾಗಿದೆ.
`ಕತಗಾಲದಿಂದ ಅನೇಕ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ನಿತ್ಯ ಶಿರಸಿಗೆ ಹೋಗಿ ಬರುತ್ತಾರೆ. ಶಾಸಕರ ಸೂಚನೆ ಮೇರೆಗೆ ಖಾಸಗಿ ಬಸ್ಸು ಓಡಾಟ ನಡೆಸಿದ್ದರಿಂದ ಎಲ್ಲರಿಗೂ ಅನುಕೂಲವಾಗಿದೆ’ ಎಂದು ಆ ಭಾಗದ ಗಜಾನನ ಪೈ ಸಂತಸ ಹಂಚಿಕೊAಡರು. ನಿತ್ಯ ಬೆಳಗ್ಗೆ 8 ಗಂಟೆಯಿAದ ಈ ಬಸ್ಸು ಕತಗಾಲದ ಮಾಸ್ತಿಹಳ್ಳದಿಂದ ಸಂಚರಿಸಲಿದೆ. ಸಂಜೆಯವರೆಗೂ ಪ್ರಯಾಣಿಕರ ಸೇವೆಗಾಗಿ ಈ ಬಸ್ಸು ಸಿಗಲಿದೆ. ದೇವಿಮನೆ ಘಟ್ಟ ತಲುಪಿದ ನಂತರ ಅಲ್ಲಿಂದ ಮುಂದೆ ಶಿರಸಿಯಿಂದ ಬರುವ ಕೆಎಸ್ಆರ್ಟಿಸಿ ಬಸ್ಸು ಪ್ರಯಾಣಿಕರನ್ನು ಕರೆದೊಯ್ಯಲಿದೆ.
