ನಿಷೇಧದ ನಡುವೆಯೂ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿ ಅಲೆಗಳ ಅಬ್ಬರಕ್ಕೆ ಪಲ್ಟಿಯಾಗಿದ್ದು, ದೋಣಿಯಲ್ಲಿದ್ದ ನಾಲ್ವರು ಮೀನುಗಾರರು ಕಾಣೆಯಾಗಿದ್ದಾರೆ. ಉಳಿದ ಇಬ್ಬರು ದಡ ಸೇರಿದ್ದಾರೆ.
ಭಟ್ಕಳದ ಮಾಸತಿಗ್ರಿಲ್ ನೆಟ್ ಹೆಸರಿನ ದೋಣಿಯಲ್ಲಿ ಬುಧವಾರ 6 ಜನ ಮೀನುಗಾರಿಕೆಗೆ ಹೋಗಿದ್ದರು. ಅರಬ್ಬಿ ಸಮುದ್ರದ ಆಳದಲ್ಲಿ ಅಬ್ಬರದ ಅಲೆಗಳು ಎದ್ದಿದ್ದು, ತೆಂಗಿನಗುoಡಿಯ ಬಳಿ ದೋಣಿ ಮುಗುಚಿ ಬಿದ್ದಿತು. ಆ ಆರು ಜನ ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದನ್ನು ನೋಡಿದ ಇನ್ನೊಂದು ದೋಣಿಯವರು ಅಲ್ಲಿದ್ದವರ ರಕ್ಷಣೆಗೆ ಧಾವಿಸಿದರು. ಹರಸಾಹಸದಿಂದ ಇಬ್ಬರನ್ನು ರಕ್ಷಿಸಿದರು. ಆದರೆ, ಉಳಿದ ನಾಲ್ವರು ಅಷ್ಟರೊಳಗೆ ಕೊಚ್ಚಿ ಹೋಗಿದ್ದರು.
ಭಟ್ಕಳದ ಮನೋಹರ ಮೊಗೇರ್, ಬೆಳೆಬಂದರಿನ ಜಾಲಿರಾಮ ಖಾರ್ವಿ ರಕ್ಷಣೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾದರು. ರಾಮಕೃಷ್ಣ ಮೊಗೇರ್, ಸತೀಶ ಮೊಗೇರ್, ಗಣೇಶ ಮೊಗೇರ್, ನಿಶ್ಚಿತ ಮೊಗೇರ್ ಎಂಬಾತರ ಹುಡುಕಾಟ ಮುಂದುವರೆದಿದೆ. ಕರಾವಳಿ ಕಾವಲು ಪಡೆ ಸಿಬ್ಬಂದಿ ಶೋಧ ನಡೆಸಿದ್ದಾರೆ.
