`ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ ನಡೆಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬುಧವಾರ 21ನೇ ದಿನದ ವೃತ ಪೂರೈಸಿದ್ದು, ಈ ದಿನ ಆಂಗ್ಲ ಭಾಷೆ ವಿರುದ್ಧ ಸಮರ ಸಾರಿದ್ದಾರೆ. `ಪ್ರತಿ ದಿನ ಒಂದು ಇಂಗ್ಲಿಷ್ ಪದ ಬಿಡುವ ಮೂಲಕ ಸ್ವಭಾಷೆಯ ಶುದ್ಧೀಕರಣ ನಡೆಸೋಣ’ ಎಂದು ಅವರು ಭಕ್ತರಿಗೆ ಕರೆ ನೀಡಿದ್ದಾರೆ!
`ಇಂಗ್ಲಿಷ್ ಎಂಬುದು ವಾಸ್ತವವಾಗಿ ಶುದ್ಧ ಭಾಷೆಯೇ ಅಲ್ಲ. ಅದೊಂದು ಕಲುಷಿತ ಭಾಷೆ’ ಎಂದು ರಾಘವೇಶ್ವರ ಶ್ರೀ ಹೇಳಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ವರ್ಣಗಳೇ ಇಲ್ಲ. ನಮ್ಮ ಸಂಸ್ಕೃತಿ-ಪರoಪರೆಗೆ ಇಂಗ್ಲಿಷ್ ಎಂದಿಗೂ ಒಗ್ಗುವುದಿಲ್ಲ’ ಎಂದು ಹೇಳಿದ್ದಾರೆ.
`ಕನ್ನಡ ವರ್ಣಮಾಲೆಯಲ್ಲಿ 52 ಅಕ್ಷರಗಳಿದ್ದರೆ ಇಂಗ್ಲಿಷ್ ಭಾಷೆಯಲ್ಲಿ ಬರೇ 26 ಅಕ್ಷರಗಳಿವೆ. ಆ ಕಲುಷಿತ ಭಾಷೆಯಿಂದ ನಾವು ದೂರವಿದ್ದು, ಕನ್ನಡ ಭಾಷೆಯ ಶುದ್ಧತೆ ಉಳಿಸಬೇಕು’ ಎಂದು ಕರೆ ನೀಡಿದ್ದಾರೆ.
`ಇಂಗ್ಲಿಷ್ ಪದಗಳನ್ನು ಸೇರಿಸಿ ಕನ್ನಡವನ್ನು ಕಲುಷಿತಗೊಳಿಸುವುದು ಬೇಡ. ಕನ್ನಡದ ಶುದ್ಧತೆ ಉಳಿಯಬೇಕು. ಇಲ್ಲದಿದ್ದರೆ ಮುಂದಿನ ಜನಾಂಗಕ್ಕೆ ನಾವು ಕಲುಷಿತ ಭಾಷೆ ಉಡುಗರೆ ಕೊಟ್ಟ ಹಾಗಾಗುತ್ತದೆ. ಆದ್ದರಿಂದ ನಮ್ಮ ಭಾಷೆಯಲ್ಲಿ ಸೇರಿಕೊಂಡಿರುವ ಇಂಗ್ಲಿಷ್ ಪದವನ್ನು ದಿನಕ್ಕೆ ಒಂದರoತೆ ಬಿಡುವ ಪ್ರತಿಜ್ಞೆ ಮಾಡೋಣ’ ಎಂದು ಅವರು ಶಿಷ್ಯರಿಗೆ ಸೂಚಿಸಿದರು.
`ಈ ದಿನದಿಂದ ಯಾರೂ ಸೋಪು ಎಂಬ ಆಂಗ್ಲ ಪದ ಬಳಕೆ ಮಾಡುವುದು ಬೇಡ. ಅದರ ಬದಲಾಗಿ ಕನ್ನಡದ ಸಾಬೂನು ಪದ ಬಳಸೋಣ. ಸಾಬೂನು ಎಂಬ ಪದ ಪರ್ಷಿಯನ್ ಭಾಷೆಯದ್ದಾಗಿದ್ದರೂ ತಿಳಿಗನ್ನಡದಲ್ಲಿ ಸಬಕಾರ ಎನ್ನಲಾಗುತ್ತದೆ. ಹೀಗಾಗಿ ಸಾಬೂನು ಪದ ಬಳಕೆ ತಪ್ಪಿಲ್ಲ’ ಎಂದು ಸಮರ್ಥಿಸಿಕೊಂಡರು. `ಸಬಕಾರ ಅಥವಾ ನೊರೆಬಿಲ್ಲೆ ಎಂಬುದು ಸೂಕ್ತ ಕನ್ನಡ ಪದ. ಸಂಸ್ಕೃತದಲ್ಲಿ ಮಾರ್ಜಕ ಎಂಬ ಬಳಕೆ ಇದೆ. ನಮ್ಮ ಹಿರಿಯರು ಬಳಸುತ್ತಿದ್ದ ಇಂಥ ಪದವನ್ನು ನಾವು ಉಳಿಸಿಕೊಳ್ಳೋಣ’ ಎಂದು ಕರೆ ನೀಡಿದರು.
`ಸೋಪು ಶಬ್ದ ಹೇಗೆ ಪಾಶ್ಚಾತ್ಯದ್ದೋ ಸೋಪಿನ ಸಂಸ್ಕೃತಿಯೂ ಪಾಶ್ಚಾತ್ಯ. ಭಾರತದಲ್ಲಿ ಅನಾದಿಕಾಲದಿಂದಲೂ ಸ್ನಾನಚೂರ್ಣದ ಬಳಕೆ ಕಾಣುತ್ತೇವೆ. ಅದು ವೈಜ್ಞಾನಿಕ ಕೂಡಾ. ಸೋಪಿನ ಕಣಗಳು ಚರ್ಮದ ರಂಧ್ರವನ್ನು ಮುಚ್ಚಿ ತ್ವಚೆಯ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಆದರೆ ಭಾರತದಲ್ಲಿ ಬಳಕೆಯಲ್ಲಿದ್ದ ಸೀಗೆಕಾಯಿಯಂಥ ಒರಟು ಸ್ನಾನಚೂರ್ಣ ಹೆಚ್ಚು ಆರೋಗ್ಯಕಾರಿ’ ಎಂದು ವಿಶ್ಲೇಷಿಸಿದರು.
`ಹಿಂದೆ ದೇಹಶುದ್ಧಿಗೆ ಮಣ್ಣನ್ನೂ ಬಳಸಲಾಗುತ್ತಿತ್ತು. ಆದರೆ ಮಣ್ಣನ್ನು ಇಂದು ಕೊಳಕು ಎಂದು ಪರಿಗಣಿಸಲಾಗುತ್ತಿದೆ. ಮಣ್ಣಿನಿಂದಲೇ ಹುಟ್ಟಿ ಮಣ್ಣಿನಲ್ಲೇ ಬೆಳೆದು ಮಣ್ಣನ್ನೇ ಸೇರುವ ನಾವು ಮಣ್ಣನ್ನು ಕೊಳಕು ಎಂದು ಪರಿಗಣಿಸುವ ಹಂತಕ್ಕೆ ಬಂದಿದ್ದೇವೆ. ಪಂಚಭೂತಗಳಿoದ ಮಾಡಲ್ಪಟ್ಟ ದೇಹದ ಶುದ್ಧಿಗೂ ಮಣ್ಣು, ನೀರು, ಅಗ್ನಿ, ಗಾಳಿ ಒಳ್ಳೆಯದು. ಆದ್ದರಿಂದ ಕ್ರಮೇಣ ಸೋಪನ್ನೇ ಬಿಡೋಣ. ಸದ್ಯ ಮೊದಲ ಹಂತದಲ್ಲಿ ಆ ಪದವನ್ನಾದರೂ ಬಿಡೋಣ’ ಎಂದು ಸಲಹೆ ಮಾಡಿದರು.
ವಿವಿವಿ ಸಮಿತಿ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ ಕೆ ಹೆಗಡೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯ ತಂಡದ ಜಿ ವಿ ಹೆಗಡೆ, ಶ್ರೀಪರಿವಾರದ ರಾಘವೇಂದ್ರ ಮಧ್ಯಸ್ಥ, ಸುಚೇತನ ಶಾಸ್ತ್ರಿಗಳು ಮತ್ತಿತರರು ಗುರುಗಳ ಅಪ್ಪಣೆ ಪಾಲಿಸಿದರು.
