ಭಟ್ಕಳದಲ್ಲಿ ಕೋಳಿ ಅಂಕ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಜೊತೆಗೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಾಲಿಯ ಹುಲ್ಲುಕ್ಕಿ ಅರಣ್ಯ ಪ್ರದೇಶದಲ್ಲಿ ಒಂದಷ್ಟು ಜನ ಕೋಳಿ ಅಂಕ ಆಡಿಸುತ್ತಿದ್ದರು. ಕೋಳಿಗಳ ನಡುವೆ ಕಾಳಗ ನಡೆಸಿ ಅದನ್ನು ಸ್ಪರ್ಧೆಯಂತೆ ಬಿಂಬಿಸಿದ್ದರು. ಜೊತೆಗೆ ಆ ಕಾಳಗದಲ್ಲಿ ಗೆಲ್ಲುವ ಕೋಳಿ ಮೇಲೆ ಹಣ ಕಟ್ಟಿದ್ದರು.
ಬಿಎನ್‌ಎಸ್ ಕಾಯ್ದೆ ಕಲಂ 112 ಪ್ರಕಾರ ಈ ರೀತಿ ಕೋಳಿ ಅಂಕ ನಡೆಸುವುದು ಅಪರಾಧವಾಗಿದ್ದು, ಪೊಲೀಸರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದರು. ಅದಾಗಿಯೂ ಮೋಜು-ಮಸ್ತಿಗಾಗಿ ಕಾಳಗ ನಡೆಸಿದವರ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿದರು.
ಕಾಳಗ ನಡೆಸಿದವರು ಕಾಡಿಗೆ ಓಡಿ ಪರಾರಿಯಾದರು. ಈ ವೇಳೆ 4 ರಿಕ್ಷಾ, 5 ಬೈಕು ಹಾಗೂ 3 ಫೋನುಗಳು ಪೊಲೀಸರಿಗೆ ಸಿಕ್ಕಿದವು. ಸ್ಥಳದಲ್ಲಿದ್ದ 3305ರೂ ಹಣವನ್ನು ಪೊಲೀಸರು ವಶಕ್ಕೆಪಡೆದರು.