ದಾಂಡೇಲಿಯಲ್ಲಿ ಬಟ್ಟೆ ಅಂಗಡಿ ನಡೆಸುವ ಮೋಸಿನ್ ಖಾನ್ ಅವರಿಗೆ ಶನಿವಾರ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗು ಸಿಕ್ಕಿದ್ದು, ವಾರಸುದಾರರನ್ನು ಹುಡುಕಿ ಬ್ಯಾಗನ್ನು ಅವರಿಗೆ ಮರಳಿಸಿದ್ದಾರೆ.
ಮೋಸಿನ್ ಖಾನ್ ಅವರು ದಾಂಡೇಲಿಯ ಬಸ್ ನಿಲ್ದಾಣದ ಮುಂಭಾಗದ ಜೆಎನ್ ರಸ್ತೆಯಲ್ಲಿ ನ್ಯೂ ಫ್ಯಾಷನ್ ಸಾರಿ ಎಂಬ ಬಟ್ಟೆ ಅಂಗಡಿ ನಡೆಸುತ್ತಾರೆ. ಶನಿವಾರ ಸಂಜೆ ಅವರ ಅಂಗಡಿ ಮುಂದೆ ಬೈಕೊಂದು ನಿಂತಿದ್ದು, ಆ ಬೈಕಿನ ಮೇಲೆ ವ್ಯಕ್ತಿಯೊಬ್ಬರು ಬ್ಯಾಗ್ ಬಿಟ್ಟು ಹೋಗಿದ್ದರು. ಸಂಜೆಯಾದರೂ ಯಾರೂ ಬ್ಯಾಗ್ ಒಯ್ಯಲು ಬಾರದ ಕಾರಣ ಮೋಸಿಸ್ ಖಾನ್ ಅನುಮಾನದಿಂದ ಆ ಬ್ಯಾಗ್ ನೋಡಿದರು. ವ್ಯಕ್ತಿಯೊಬ್ಬರಿಗೆ ತೀರಾ ಅಗತ್ಯವಾದ ಹಲವು ಸಾಮಗ್ರಿಗಳು ಆ ಬ್ಯಾಗಿನಲ್ಲಿದ್ದವು.
ಹೀಗಾಗಿ ಆ ಬ್ಯಾಗಿನ ಜೊತೆ ಒಳಗಿದ್ದ ಸಾಮಗ್ರಿಗಳನ್ನು ವಿಡಿಯೋ ಮಾಡಿದ ಅವರು ಅದನ್ನು ತಮ್ಮ ಅಂಗಡಿಯಲ್ಲಿರಿಸಿಕೊAಡರು. ನಂತರ ಮಾಧ್ಯಮದವರ ನೆರವುಪಡೆದು ಬ್ಯಾಗಿನ ವಾರಸುದಾರರ ಹುಡುಕಾಟ ನಡೆಸಿದರು. ಕೊನೆಗೆ ಬಾಂಬೆಚಾಳದ ನಿವಾಸಿ ಆದಿಲ್ ಆ ಬ್ಯಾಗಿನ ವಾರಸುದಾರ ಎಂದು ಗೊತ್ತಾಯಿತು.
ವಾರಸುದಾರರ ದಾಖಲೆ ಪರಿಶೀಲಿಸಿ, ಬ್ಯಾಗಿನಲ್ಲಿದ್ದ ವಸ್ತುಗಳ ಬಗ್ಗೆ ತುಲನೆ ಮಾಡಿ ಅದನ್ನು ಆದಿಲ್ ಅವರಿಗೆ ಹಸ್ತಾಂತರಿಸಿದರು. ಆ ಬ್ಯಾಗಿನಲ್ಲಿ 6 ಲಕ್ಷ ರೂ ಮೌಲ್ಯದ ಚಿನ್ನದ ಬಳೆ ಹಾಗೂ 5 ಸಾವಿರ ಹಣ ಸಹ ಇತ್ತು. ಮೋಸಿನ್ ಖಾನ್ ಅವರ ಪ್ರಾಮಾಣಿಕ ಸೇವೆಗೆ ಆದೀಲ್ ಜೊತೆ ಅಲ್ಲಿ ನೆರೆದಿದ್ದವರು ಸಂತಸವ್ಯಕ್ತಪಡಿಸಿದರು.
