ಮುಂಡಗೋಡದ ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿಯ ಗುಳಗೆ ಮಾರಾಟ ನಡೆದಿದ್ದು, ಅಧಿಕಾರಿಗಳು ದಾಳಿ ನಡೆಸಿ ಜನೌಷಧಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಜನರ ಜೀವದ ಜೊತೆ ಆಟವಾಡುತ್ತಿದ್ದ ಜನೌಷಧಿ ಕೇಂದ್ರದ ಉಸ್ತುವಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ.
ಮುಂಡಗೋಡದ ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಖಾಸಗಿ ಸಂಸ್ಥೆಯ ಔಷಧ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ ಸ್ವರೂಪರಾಣಿ ಪಾಟೀಲ ಅವರು ಅಲ್ಲಿ ಹೋಗಿ ತಪಾಸಣೆ ನಡೆಸಿದರು. ದೂರಿನ ವಿಷಯ ಸತ್ಯವಾಗಿದ್ದರಿಂದ ತಮ್ಮ ತಂಡದವರನ್ನು ಕರೆಯಿಸಿ ಮಳಿಗೆಗೆ ಬೀಗ ಹಾಕಿಸಿದರು.
ಜು 30ರಂದು ಸಹ ಆಸ್ಪತ್ರೆ ಆವರಣದಲ್ಲಿರುವ ಕ್ಯಾಂಟೀನ್ ಹಾಗೂ ಜನೌಷಧ ಕೇಂದ್ರದ ಮೇಲೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ತಂಡ ದಾಳಿ ಮಾಡಿತ್ತು. ಆಗಲೇ ಅಲ್ಲಿ ಖಾಸಗಿ ಕಂಪನಿ ಔಷಧ ಕಾಣಿಸಿದ್ದು, ನೋಟಿಸ್ ನೀಡಲಾಗಿತ್ತು. ಆದರೆ, ಮಳಿಗೆ ನಡೆಸುವವರು ಆ ನೋಟಿಸಿಗೆ ತಲೆಕೆಡಿಸಿಕೊಂಡಿರಲಿಲ್ಲ.
ವಿಚಾರಣಾ ವರದಿ ಪರಿಶೀಲಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ ನೀರಜ ಬಿ ವಿ ಜನೌಷಧ ಕೇಂದ್ರದಲ್ಲಿ ಲೋಪದೋಷಗಳು ಸ್ಪಷ್ಟವಾದ ಹಿನ್ನಲೆ ಆ ಕೇಂದ್ರ ಮುಚ್ಚಲು ಆದೇಶಿಸಿದರು. ಈ ಹಿನ್ನಲೆ ಜನೌಷಧಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.
