`ಅವರಿವರ ಕೆಳಗೆ ಕೆಲಸ ಮಾಡಿದ್ದು ಸಾಕು. ಸ್ವಂತವಾಗಿ ಏನಾದರೂ ಮಾಡಬೇಕು’ ಎಂದು ನಿರ್ಣಯಿಸಿದ ಕಾರವಾರದ ಇಬ್ಬರು ಕಾರ್ಮಿಕರು ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿ ಸಿಕ್ಕಿ ಬಿದ್ದಿದ್ದಾರೆ.
ಶಿರವಾಡ ನಾಡಗೇರಿಯ ಕಟ್ಟಡ ಕಾರ್ಮಿಕ ಇಬ್ರಾಹಿಂ ಸಾಬ್ ಹಾಗೂ ಕಡವಾಡ ಮಹಾದೇವವೇವಸ್ಥಾನದ ಬಳಿಯ ಹೊಟೇಲ್ ಕಾರ್ಮಿಕ ಕಾರ್ತಿಕ ಕಡವಾಡಕರ್ ಗಾಂಜಾ ಜೊತೆ ಪೊಲೀಸರ ಅತಿಥಿಯಾಗಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ಅವರಿಬ್ಬರನ್ನು ಚಿತ್ತಾಕುಲ ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸಿದ್ದಾರೆ.
ಶಿರವಾಡದ ನಾಡಗೇರಿ ಬಳಿ ಬಿಶೋಪ್ ಆಸ್ಪತ್ರೆ ಬಳಿ ಮನೆ ಮಾಡಿಕೊಂಡಿರುವ ಇಬ್ರಾಹಿಂ ಸಾಬ್ ಅಲ್ಲಿ ಇಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದರು. ಇಬ್ರಾಹಿಂ ಸಾಬ್ ಅವರಿಗೆ ಕಡವಾಡದ ಮಹಾದೇವಸ್ಥಾನದ ಬಳಿಯಿರುವ ನೀಲುಸ್ಟೀಟಿನಲ್ಲಿ ವಾಸವಾಗಿರುವ ಕಾರ್ತಿಕ ಕಡವಾಡಕರ್ ಅವರ ಸ್ನೇಹ ಬೆಳೆಯಿತು. ಅವರಿಬ್ಬರು ಸೇರಿ ಗೋವಾ ಕಡೆಯಿಂದ ಸ್ಕೂಟಿಯಲ್ಲಿ ಗಾಂಜಾ ಸಾಗಿಸುತ್ತಿದ್ದರು.
ಕದ್ರಾ ಸಿಪಿಐ ಪ್ರಕಾಶ ದೇವಾಡಿಗ ಅವರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತು. ಅಗಸ್ಟ 2ರಂದು ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪೊಲೀಸರು ಸ್ಕೂಟಿಯನ್ನು ತಪಾಸಣೆ ಮಾಡಿದರು. ಆಗ, ಅಲ್ಲಿ 50 ಗ್ರಾಂ ಗಾಂಜಾ ಕಾಣಿಸಿತು. ಕೂಡಲೇ ಇಬ್ಬರನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
