ಕಾಮಿಡಿ ಕಿಲಾಡಿ ಖ್ಯಾತಿಯ ಚಂದ್ರಶೇಖರ ಸಿದ್ದಿ ಅವರ ಆತ್ಮಹತ್ಯೆಯ ಬಗ್ಗೆ ಅವರ ತಾಯಿ ಲಕ್ಷ್ಮೀ ಸಿದ್ದಿ ಮಾತನಾಡಿದ್ದು, ಸಾವಿನಲ್ಲಿ ಅನುಮಾನವಿರುವುದಾಗಿ ಹೇಳಿದ್ದಾರೆ. ಜೊತೆಗೆ ಚಂದ್ರಶೇಖರ ಸಿದ್ದಿ ಅವರ ತಂದೆ ಸಹ ಆತ್ಮಹತ್ಯೆಗೆ ಶರಣಾಗಿದನ್ನು ನೆನಸಿಕೊಂಡು ಕಣ್ಣೀರು ಹಾಕಿದ್ದಾರೆ.
ಯಲ್ಲಾಪುರ ತಾಲೂಕಿನ ತೆಲಂಗಾರ್ ಬಳಿಯ ವಜ್ರಳ್ಳಿ ಚಂದ್ರಶೇಖರ ಸಿದ್ದಿ ಅವರ ಊರು. ಕಳೆದ 2 ತಿಂಗಳಿನಿoದ ಕಟ್ಟಿಗೆ ಗ್ರಾಮದ ಶ್ರೀಪತಿ ಕೋಟೆಮನೆ ಅವರ ತೋಟದ ಕೆಲಸ ಮಾಡಿಕೊಂಡಿದ್ದರು. ಚಂದ್ರಶೇಖರ ಸಿದ್ದಿ ಅವರ ಜೊತೆ ಅವರ ಪತ್ನಿ ವನಜಾಕ್ಷಿ ಸಿದ್ದಿ ಹಾಗೂ ಮೂರು ವರ್ಷದ ಮಗ ಸಹ ಅಲ್ಲಿಯೇ ಉಳಿದಿದ್ದರು.
ಜುಲೈ 31ರಂದು ಚಂದ್ರಶೇಖರ ಸಿದ್ದಿ ಅವರು ಅಂಗನವಾಡಿಗೆ ಹೋಗಿದ್ದ ಮಗನನ್ನು ಮನೆಗೆ ತಂದು ಬಿಟ್ಟಿದ್ದರು. ಅದಾದ ನಂತರ ತಂಬಿಗೆ ಹಿಡಿದು ಬೆಟ್ಟಕ್ಕೆ ಹೋಗಿದ್ದ ಅವರು ಅಲ್ಲಿಯೇ ಮರಕ್ಕೆ ನೇತಾಡಿ ಪ್ರಾಣ ಬಿಟ್ಟರು. `ತನ್ನ ಮಗನಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಪತ್ನಿ ಮೇಲೆ ಮುನಿಸಿಕೊಂಡಿದ್ದರಿoದ ಮಗ ಮಾನಸಿಕವಾಗಿ ಕುಗ್ಗಿದ್ದ’ ಎನ್ನುತ್ತ ಆಶಾ ಕಾರ್ಯಕರ್ತೆಯೂ ಆಗಿರುವ ಚಂದ್ರಶೇಖರ ಸಿದ್ದಿ ಅವರ ತಾಯಿ ಲಕ್ಷ್ಮೀ ಸಿದ್ದಿ ಕಣ್ಣೀರು ಹಾಕಿದರು.
2020ರಲ್ಲಿ ಚಂದ್ರಶೇಖರ ಸಿದ್ದಿ ಅವರ ತಂದೆ ನಾಗಪ್ಪ ಸಿದ್ದಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಮಗ ಸಹ ಅದೇ ದಾರಿ ತುಳಿದ ಬಗ್ಗೆ ಲಕ್ಷ್ಮೀ ಸಿದ್ದಿ ನೋವು ತೋಡಿಕೊಂಡರು. `ಸೀತಾರಾಮ ಕಲ್ಯಾಣ ಧಾರಾವಾಹಿಯಲ್ಲಿ ಮಗ ಉತ್ತಮ ಪಾತ್ರ ಮಾಡಿ ಮನೆಗೆ ಬಂದಿದ್ದ. ಕಟ್ಟಿಗೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿ ವಾಸವಾಗಿದ್ದ. ಆದರೆ, ಆತ ಮತ್ತೆ ಮನೆಗೆ ಮರಳಲೇ ಇಲ್ಲ’ ಎನ್ನುತ್ತ ಭಾವುಕರಾದರು.
`ಚಂದ್ರಶೇಖರ ಸಿದ್ದಿ ಮದ್ಯಪಾನ ಮಾಡಿದಾಗಲೆಲ್ಲ ನನಗೆ ಹೊಡೆಯುತ್ತಿದ್ದ. ನನ್ನ ಮೇಲೆ ಅನಗತ್ಯ ಅನುಮಾನ ಪಡುತ್ತಿದ್ದ. ಆರು ತಿಂಗಳ ಹಿಂದೆ ಈ ಬಗ್ಗೆ ಪೊಲೀಸರಿಗೆ ಹೇಳಿದ್ದು, ಆಮೇಲೆ ನಂತರ ರಾಜಿ-ಸಮಾಧಾನ ನಡೆದಿತ್ತು. ನಂತರ ನಾವಿಬ್ಬರು ಸುಂದರ ಸಂಸಾರ ನಡೆಸುತ್ತಿದ್ದೇವು. ನನಗೂ ನಾಟಕ ತರಬೇತಿ ನೀಡುವುದಾಗಿ ಚಂದ್ರಶೇಖರ್ ಸಿದ್ದಿ ಹೇಳಿದ್ದರು. ನಮ್ಮ ನಡುವೆ ಸದ್ಯ ಯಾವುದೇ ಸಮಸ್ಯೆ ಇರಲಿಲ್ಲ’ ಎಂದು ಚಂದ್ರಶೇಖರ ಸಿದ್ದಿ ಅವರ ಪತ್ನಿ ವನಜಾಕ್ಷಿ ಸಿದ್ದಿ ಹೇಳಿದ್ದಾರೆ.
