ಹೊನ್ನಾವರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಂದಿರಿಸಿದ್ದ ಕಬ್ಬಿಣ ಕದ್ದು ಪರಾರಿಯಾಗಿದ್ದ ಶಿವಮೊಗ್ಗದ ಕಳ್ಳರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೂವರು ವ್ಯಾಪಾರಿ ಹಾಗೂ ಒಬ್ಬ ಕೂಲಿ ಕಾರ್ಮಿಕರನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದು, ಅವರಿಂದ 5 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿದ್ದಾರೆ.
ಹೊನ್ನಾವರದ ಮಂಕಿ ಬಳಿಯ ಕಾಸರಕೋಡ್ ರೋಷನ್ ಮಹಿದಿ ಮೊಹಲ್ಲಾದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ಅಗತ್ಯ ಕಬ್ಬಿಣವನ್ನು ಖರೀದಿಸಿ ಸ್ಥಳದಲ್ಲಿ ದಾಸ್ತಾನು ಮಾಡಲಾಗಿತ್ತು. ಜುಲೈ 15ರಂದು ಅಲ್ಲಿದ್ದ ಕಬ್ಬಿಣಗಳು ಕಾಣೆಯಾಗಿದ್ದವು. ಶಿವಮೊಗ್ಗದ ಶಿಕಾರಿಪುರದ ವ್ಯಾಪಾರಿಗಳಾದ ತನ್ವೀರ್ ಸಾಬ್, ಷಹಾದ್ ಸಾಬ್, ಮಹ್ಮದ್ ಅಹ್ಮದ್ ಸೇರಿ ಅಲ್ಲಿದ್ದ ಸೆಂಟ್ರಿoಗ್ ಶೀಟ್ ಅಪಹರಿಸಿದ್ದರು. ಕೂಲಿ ಕೆಲಸ ಮಾಡುವ ಕಲಿಮುಲ್ಲಾ ಸಾಬ್ ಈ ಕಳ್ಳತನಕ್ಕೆ ಸಹಾಯ ಮಾಡಿದ್ದರು.
ಕಳ್ಳತನದ ಬಗ್ಗೆ ಮಂಕಿ ಉಂಪ್ಲಿಯ ರಾಮಾ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ ಹಾಗೂ ಎಂ ಜಗದೀಶ ಸೇರಿ ಈ ದೂರಿನ ಬಗ್ಗೆ ಪೊಲೀಸ್ ತಾಂತ್ರಿಕ ವಿಭಾಗದ ಉದಯ ಗುನಗಾ ಅವರ ಬಳಿ ಚರ್ಚಿಸಿದರು. ಉದಯ ಗುನಗಾ ಅವರು ನೀಡಿದ ತಾಂತ್ರಿಕ ಮಾಹಿತಿ ಆಧರಿಸಿ ಭಟ್ಕಳ ವಿಭಾಗ ಪೊಲೀಸ್ ಉಪಾಧೀಕ್ಷಕ ಮಹೇಶ ಕೆ ಹಾಗೂ ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಕಳ್ಳತನದ ಸಾಕ್ಷಿ ಸಂಗ್ರಹಿಸಿದರು.
ಪೊಲೀಸ್ ಉಪನಿರೀಕ್ಷಕ ರಾಜಶೇಖರ ವಂದಲಿ, ಪೊಲೀಸ್ ಸಿಬ್ಬಂದಿ ಗಜಾನನ ನಾಯ್ಕ ಹಾಗೂ ವಿಠ್ಠಲ ಗೌಡ ಅವರು ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಮನೋಜ ಡಿ, ರವಿ ನಾಯ್ಕ, ಚಂದ್ರಶೇಖರ ನಾಯ್ಕ, ಅನಿಲ ಲಮಾಣಿ ಸೇರಿ ನಾಲ್ವರು ಕಳ್ಳರನ್ನು ಹಿಡಿದರು. ಈ ಎಲ್ಲಾ ಪೊಲೀಸರು ಸೇರಿ ಪ್ರಶ್ನಿಸಿದಾಗ ಕಳ್ಳರು ತಮ್ಮ ತಪ್ಪು ಒಪ್ಪಿಕೊಂಡಿದ್ದು, ಕದ್ದ ಸಾಮಗ್ರಿಗಳನ್ನು ಕಾಣಿಸಿದರು. ಅಗಷ್ಟ 4ರಂದು ಪೊಲೀಸರು 2 ಲಕ್ಷ ರೂ ಬೆಲೆಯ 180 ಸೆಂಟ್ರಿoಗ್ ಶೀಟ್ ಹಾಗೂ ಕಳ್ಳತನಕ್ಕೆ ಬಳಸಿದ 3 ಲಕ್ಷ ರೂ ಮೌಲ್ಯದ ಅಶೋಕ ಲೈಲ್ಯಾಂಡ್ ವಾಹನವನ್ನು ಕಳ್ಳರಿಂದ ಜಪ್ತು ಮಾಡಿದರು.
