ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ಸಮಾದೇಷ್ಟರಾಗಿದ್ದ ಡಾ ಸಂಜು ನಾಯಕ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಅಧಿಕಾರ ದುರುಪಯೋಗ ಆರೋಪದ ಹಿನ್ನಲೆ ಅವರನ್ನು ಸರ್ಕಾರ ಸೇವೆಯಿಂದ ಕೈ ಬಿಟ್ಟಿದೆ.
ಡಾ ಸಂಜು ನಾಯಕ ಅವರು ಅಂಕೋಲಾ ತಾಲೂಕಿನಲ್ಲಿ ವೈದ್ಯಕೀಯ ಸೇವೆಯಲ್ಲಿದ್ದಾರೆ. ಅವರು ಖ್ಯಾತ ದಂತವೈದ್ಯರಾಗಿದ್ದು, ಕಾರವಾರದಲ್ಲಿಯೂ ಕ್ಲಿನಿಕ್ ಹೊಂದಿದ್ದರು. ಡಾ ಸಂಜು ನಾಯಕ ಅವರನ್ನು ಸರ್ಕಾರ ಗೃಹರಕ್ಷಕ ಇಲಾಖೆಯ ಸಮಾದೇಷ್ಟರಾಗಿ ನೇಮಿಸಿಕೊಂಡಿತ್ತು. ಆದರೆ, ಅಧಿಕಾರ ದುರುಪಯೋಗದ ಹಿನ್ನಲೆ ಅವರನ್ನು ದಿಢೀರ್ ಆಗಿ ಸೇವೆಯಿಂದ ಕೈ ಬಿಟ್ಟಿದೆ.
ಪೌರ ರಕ್ಷಣಾ ಇಲಾಖೆಯ ಆರಕ್ಷಕ ಮಹಾನಿರ್ದೇಶಕರು ಅಗಷ್ಟ 4ರಂದು ಅವರನ್ನು ಸೇವೆಯಿಂದ ಸಮಾಲೋಪನೆಗೊಳಿಸುವ ಕಡತಕ್ಕೆ ಸಹಿ ಮಾಡಿದ್ದಾರೆ. ಅದರಲ್ಲಿ ಉಲ್ಲೇಖವಾಗಿರುವಂತೆ ಜುಲೈ 24ರ ಸರ್ಕಾರದ ಆದೇಶದ ಪ್ರಕಾರ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದ ಬಗ್ಗೆ ತಿಳಿಸಲಾಗಿದೆ. ಗೃಹರಕ್ಷಕ ದಳದ ನಿಯಮ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗ ಆರೋಪದ ಹಿನ್ನಲೆ ಸಂಜು ನಾಯಕ ಅವರ ವಿರುದ್ಧ ಈ ಕ್ರಮ ಜರುಗಿಸಲಾಗಿದೆ.
ಸದ್ಯ ಪೊಲೀಸ್ ಅಧಿಕ್ಷಕರಿಗೆ ಹೆಚ್ಚುವರಿಯಾಗಿ ಗೃಹರಕ್ಷಕ ಸಮಾದೇಷ್ಟರ ಹುದ್ದೆ ನೀಡಲಾಗಿದೆ. ಪೊಲೀಸ್ ಅಧೀಕ್ಷಕರಿಗೂ ಈ ಹುದ್ದೆ ಪ್ರಭಾರವಾಗಿ ನೀಡಲಾಗಿದ್ದು, ಮುಂದಿನ ಆದೇಶದವರೆಗೂ ಅದನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.
