ಶಿರಸಿಯಲ್ಲಿರುವ `ಸಹಸ್ರಗುಂಡಿ’ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೋರಾಟ ಶುರು ಮಾಡಿದ್ದಾರೆ. ಈಗಾಗಲೇ ಹಲವು ರಸ್ತೆಯ ಗುಂಡಿ ಮುಚ್ಚಿಸಿರುವ ಅವರು ಉಳಿದ ರಸ್ತೆ ಗುಂಡಿ ಮುಚ್ಚುವುದಕ್ಕಾಗಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಸೂಚಿಸಿದ ದಿನದೊಳಗೆ ಗುಂಡಿ ಮುಚ್ಚದೇ ಇದ್ದರೆ `ಉಗ್ರ ಹೋರಾಟ’ ಮಾಡುವುದಾಗಿ ಎಚ್ಚರಿಸಿದ್ದಾರೆ.
`ಪ್ರತಿದಿನ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಅನೇಕರು ಇದರಿಂದ ಪ್ರಾಣ ಕಳೆದುಕೊಂಡಿದ್ದು, ಬಸ್ ಸಹ ಸಂಚರಿಸಲಾಗದ ಸ್ಥಿತಿಯಲ್ಲಿದೆ. ಬಸ್ ಸಮಸ್ಯೆ ಜೊತೆ ರೈತರ ಅನುಕೂಲಕ್ಕಾಗಿ ಮಳೆ ಮಾಪನ ಕೇಂದ್ರಗಳನ್ನು ಸರಿಪಡಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ತಮ್ಮ ಬೆಂಬಲಿಗರ ಜೊತೆ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ಆಗ್ರಹಿಸಿದ್ದಾರೆ.
ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಚೇರಿಯವರೆಗೆ ಗುರುವಾರ ಅವರು ಪಾದಯಾತ್ರೆ ಮಾಡಿದರು. `ಹದಗೆಟ್ಟ ವ್ಯವಸ್ಥೆಯನ್ನು ಬದಲಿಸಿ’ ಎಂದು ಅನಂತಮೂರ್ತಿ ಜೊತೆಗಿದ್ದವರು ಘೋಷಣೆ ಕೂಗಿದರು. `ಶ್ರೀನಗರ ಶಾಲೆಯ ಶಿಕ್ಷಕಿಯೊಬ್ಬರು ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಮತ್ತೊಬ್ಬ ಶಿಕ್ಷಕರ ಪರಿಸ್ಥಿತಿ ಗಂಭಿರವಾಗಿದ್ದು, ಆಡಳಿತ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು. `ಶಿರಸಿಯಲ್ಲಿ ಸುಮಾರು 1500ಕಿಮೀ ಗ್ರಾಮೀಣಾಭಿವೃದ್ಧಿ ರಸ್ತೆಗಳಿವೆ. ಎಲ್ಲಿಯೂ ಕೂಡ ಗುಂಡಿ ಮುಚ್ಚುವಂತಹ ಕೆಲಸ ಆಗಿಲ್ಲ. ಎಲ್ಲ ಕಡೆಯೂ ರಸ್ತೆ ಹಾಳಾಗಿದೆ’ ಎಂದು ಪ್ರತಿಭಟನಾಕಾರರು ಅಸಮಧಾನವ್ಯಕ್ತಪಡಿಸಿದರು.
`ಶಾಸಕರಾಗಿ ಭೀಮಣ್ಣ ನಾಯ್ಕ ಅವರು ಅಧಿಕಾರದಲ್ಲಿರುವುದರಿಂದ ಈ ಬಗ್ಗೆ ಅವರನ್ನು ಪ್ರಶ್ನಿಸುತ್ತಿದ್ದೇವೆ. ವೈಯಕ್ತಿಕ ಪ್ರತಿಷ್ಠೆ ಇಲ್ಲಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಸ್ಪಷ್ಟಪಡಿಸಿದರು. `ಎಲ್ಲ ಊರುಗಳಿಗೆ ಬಸ್ಸುಗಳು ಸರಿಯಾಗಿ ಬರುತ್ತಿಲ್ಲ. ಬಸ್ಸುಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಕೆಟ್ಟು ನಿಂತ ಬಸ್ಸುಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಸರಿಯಾದ ನಿರ್ವಹಣೆಯೇ ಇಲ್ಲ’ ಎಂದು ದೂರಿದರು.
ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷೆ ಉಷಾ ಹೆಗಡೆ, ಬಿಜೆಪಿಯ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಬಿಜೆಪಿ ನಗರ ಮಂಡಲ ಪ್ರದಾನ ಕಾರ್ಯದರ್ಶಿ ಮಹಾಂತೇಶ್ ಹಾದಿಮನಿ, ಸಾಮಾಜಿಕ ಮುಖಂಡ ರಾಮು ಕಿಣಿ, ಹುತ್ಗಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶೋಭಾ ನಾಯ್ಕ, ಹಿರಿಯ ಹೋರಾಟಗಾರ ಜಯಶೀಲ ಗೌಡರ್, ಯುವ ಮುಖಂಡ ಮಂಜುನಾಥ ಪಾಟೀಲ್ ದಾಸನಕೊಪ್ಪ ಇತರರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. ಪಾದಯಾತ್ರೆಯಲ್ಲಿ ಪ್ರಮುಖರಾದ ಅನಿಲ ಕರಿ, ಚಂದ್ರಕಾoತ ಹೆಗಡೆ ಕೊಳಗಿಬೀಸ್, ರವಿ ಹೆಗಡೆ ಹಳದೋಟ, ಪವಿತ್ರ ಹೊಸುರು, ಅನಸೂಯಾ ಕಡಬಾಳ, ಜಿ ವಿ ಹೆಗಡೆ ಓಣಿಕೇರಿ, ಪ್ರಭಾವತಿ ಗೌಡ, ದೀಪಾ ನಾಯ್ಕ, ವಿ ಎಂ ಹೆಗಡೆ ಕಬ್ಬೆ, ನಾಗೇಂದ್ರ ತೆಪ್ಪಾರ್, ವಿಶ್ವನಾಥ ಬನವಾಸಿ, ಸಂತೋಷ ಗೌಡರ್, ಆದರ್ಶ ಪೈ, ಗಿರೀಶ ಸೋವಿನಕೊಪ್ಪ, ನಿರ್ಮಲಾ ಶೆಟ್ಟಿ ರಾಜು ಹೆಗಡೆ ಸಾಗಿದರು.
