`ಐದು ಅಡಿಗಿಂತ ಎತ್ತರದ ಗಣಪನ ವಿಗ್ರಹ ಸ್ಥಾಪಿಸಬಾರದು’ ಎಂದು ಸರ್ಕಾರ ವಿಧಿಸಿದ ಷರತ್ತು ಭಕ್ತರನ್ನು ಆತಂಕಕ್ಕೀಡು ಮಾಡಿದೆ. ಹಿಂದು ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುತ್ತಿರುವುದಕ್ಕೆ ನಾಗರಿಕ ವೇದಿಕೆ ಅಸಮಧಾನವ್ಯಕ್ತಪಡಿಸಿದೆ.
`ಸಾರ್ವಜನಿಕ ಗಣೇಶ ಹಬ್ಬಕ್ಕೆ ಪೊಲೀಸರ ಅನುಮತಿಪಡೆಯಬೇಕು. ಪ್ಲಾಸ್ಟಿಕ್ ಬಳಕೆ ಮಾಡಬಾರದು. ಧ್ವನಿವರ್ಧಕ ಬಳಸಬಾರದು. ಹಸಿರು ಪಟಾಕಿ ಮಾತ್ರ ಸಿಡಿಸಬೇಕು’ ಎಂಬ ನಿಯಮಗಳನ್ನು ಈ ಹಿಂದೆಯೇ ಭಕ್ತರು ಒಪ್ಪಿಕೊಂಡಿದ್ದಾರೆ. ಆದರೆ, ಇದೀಗ ಸರ್ಕಾರ ಗಣಪತಿ ವಿಗ್ರಹದ ಎತ್ತರ ಹಾಗೂ ಅಲಂಕಾರಿಕ ವಸ್ತುಗಳ ಬಗ್ಗೆ ಕಟ್ಟಪ್ಪಣೆ ಹೊರಡಿಸಿದನ್ನು ಭಕ್ತರು ಸಹಿಸಿಕೊಳ್ಳುತ್ತಿಲ್ಲ.
`ಬಣ್ಣರಹಿತ ಗಣಪತಿಯನ್ನು ಮಾತ್ರ ಸ್ಥಾಪಿಸಬೇಕು. ತಿಂಗಳ ಕಾಲ ಮೂರ್ತಿ ಸ್ಥಾಪನೆ ಮಾಡಬಾರದು ಎಂದು ಸರ್ಕಾರ ಹೊಸ ಷರತ್ತು ವಿಧಿಸಿದ್ದು ಅದು ಸರಿಯಲ್ಲ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. `ಗಣೇಶ ಮಂಟಪದಲ್ಲಿ ಅಲಂಕಾರಕ್ಕಾಗಿ ಬಲೂನು ಬಳಸಬಾರದು. ಥರ್ಮಕೋಲ್ ಪ್ರವೇಶವಿಲ್ಲ’ ಎಂಬುದು ಮೂರ್ಖತನದ ಆದೇಶ ಎಂದವರು ಅನಿಸಿಕೆವ್ಯಕ್ತಪಡಿಸಿದ್ದಾರೆ.
`ರಾತ್ರಿ 10ರಿಂದ ಬೆಳಗ್ಗೆ 6ಗಂಟೆಯವರೆಗೆ ಮೈಕ್ ಬಳಸದಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಕೆಲವರು ಬೆಳಗ್ಗೆ 5 ಗಂಟೆಗೆ ದೊಡ್ಡದಾಗಿ ಮೈಕ್ ಹಚ್ಚುತ್ತಾರೆ. ವಷಧವಿಡೀ ದೊಡ್ಡದಾಗಿ ಕೂಗಿದರೂ ಅವರ ವಿರುದ್ಧ ಕಾನೂನುಕ್ರಮ ಏಕಿಲ್ಲ?’ ಎಂದು ರಾಮು ನಾಯ್ಕ ಪ್ರಶ್ನಿಸಿದ್ದಾರೆ. `ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಹೊಸ ಆದೇಶ ಹಿಂದು ಧಾರ್ಮಿಕ ನಂಬಿಕೆ ಕೆಡಿಸುವ ಪ್ರಯತ್ನವಾಗಿದೆ’ ಎಂದವರು ಹೇಳಿದ್ದಾರೆ.
