ಶಿರಸಿಯಲ್ಲಿ ಸುರಿದ ಧಾರಾಕಾರ ಮಳೆಗೆ ಮಣ್ಣಿನ ಮನೆ ನೆನೆದಿದ್ದು, ಗುರುವಾರದ ಗಾಳಿಗೆ ಮನೆ ಬಿದ್ದಿದೆ. ಸ್ವಂತ ಸೂರು ಕಳೆದುಕೊಂಡ ಎರಡು ಬಡ ಕುಟುಂಬ ಆಶ್ರಯವಿಲ್ಲದೇ ಬೀದಿಗೆ ಬಂದಿದೆ.
ಶಿರಸಿ ತಾಲೂಕಿನ ಬಂಕನಾಳ ಗ್ರಾಮದಲ್ಲಿ ಎರಡು ಮನೆಗಳು ನೆಲಸಮವಾಗಿದೆ. ರಾಘು ನಾಯ್ಕ ಹಾಗೂ ದಾಕ್ಷಾಯಣಿ ನಾಯ್ಕ ಎಂಬ ಅಣ್ಣ-ತಂಗಿ ಒಂದೇ ಕಡೆ ಎರಡು ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದರು. ಆ ಎರಡು ಮನೆ ಒಟ್ಟಿಗೆ ಕುಸಿದಿದ್ದು, ವಸತಿ ಸಮಸ್ಯೆಯಿಂದ ಆ ಕುಟುಂಬದವರು ಕೆಂಗಟ್ಟಿದ್ದಾರೆ.
ಎರಡು ದಿನದ ಹಿಂದೆಯೇ ಮನೆ ಕುಸಿತ ಶುರುವಾಗಿದ್ದು, ಮುನ್ನಚ್ಚರಿಕೆವಹಿಸಿದ್ದರಿಂದ ಮನೆಯಲ್ಲಿದ್ದವರು ಜೀವ ಉಳಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಬೆಳಗ್ಗಿನ ಅವಧಿಯಲ್ಲಿ ಗೋಡೆಗಳು ಕುಸಿದಿವೆ. ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಮಣ್ಣಿನ ಅಡಿ ಹೂತು ಹೋಗಿದೆ.
ಸದ್ಯ ಮಳೆ ಕಡಿಮೆ ಆದ ಕಾರಣ ಆ ಎರಡು ಕುಟುಂಬದವರು ಅಲ್ಲಿದ್ದ ಮರದ ಬಳಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ಕಳೆಯಲು ಅವರಿಗೆ ಯೋಗ್ಯ ಸ್ಥಳ ಸಿಕ್ಕಿಲ್ಲ. ಜೋರು ಮಳೆ ಬಂದರೆ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರದ ನೆರವಿಗಾಗಿ ಸಂತ್ರಸ್ತರು ಕಾದಿದ್ದಾರೆ.
