ಯಲ್ಲಾಪುರ ಮಂಚಿಕೇರಿ ಸುತ್ತಮುತ್ತದ ತೋಟ-ಗದ್ದೆ-ಬೆಟ್ಟಗಳಲ್ಲಿ ಆನೆ ಸಂಚಾರ ನಡೆದಿದೆ. ಒಂಟಿ ಸಲಗ ಓಡಾಡಿದ ಕುರುಹು ಕಂಡು ಇಲ್ಲಿನ ಜನ ಹೌಹಾರಿದ್ದಾರೆ.
ಎರಡು ದಿನಗಳ ಹಿಂದೆ ಮಂಚಿಕೇರಿ ಸಮೀಪದ ಕೊಕ್ಕಾರ ಭಾಗದಲ್ಲಿ ಆನೆ ಓಡಾಟದ ಹೆಜ್ಜೆ ಕಾಣಿಸಿದೆ. ಸುತ್ತಲಿನ ಕೆಲ ಅಡಕೆ ತೋಟಗಳಲ್ಲಿ ಆನೆ ನಡೆದು ಹೋಗಿದೆ. ಪರಿಣಾಮ ಅಲ್ಲಿ ಭಾರೀ ಗಾತ್ರದ ಹೊಂಡಗಳು ಬಿದ್ದಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.
ಆನೆ ಓಡಾಡಿದ ಜಾಗದಲ್ಲಿ ಅಡಕೆ ಗಿಡ, ಮರಗಳಿಗೆ ಯಾವುದೇ ಹಾನಿ ಆಗಿಲ್ಲ. ಮರುದಿನ ಹೆಜ್ಜೆ ಹಾಗೂ ಸಗಣಿ ನೋಡಿದ ನಂತರ ಆನೆ ಬಂದು ಹೋಗಿರುವ ಬಗ್ಗೆ ಜನರಿಗೆ ಗೊತ್ತಾಗಿದೆ. ಮಾಹಿತಿ ಪ್ರಕಾರ ಚಿಪಗೇರಿ ಕಡೆಯಿಂದ ಈ ಆನೆ ಪ್ರವೇಶವಾಗಿದ್ದು, ಮರಳಿ ಅದೇ ಕಡೆ ಪ್ರಯಾಣ ಬೆಳೆಸಿದೆ. ಅರಣ್ಯಾಧಿಕಾರಿಗಳು ಸಹ ಸ್ಥಳ ಭೇಟಿ ಮಾಡಿದ್ದಾರೆ.
