`ಸರ್ಕಾರಿ ಕೆಲಸ ಮಾಡಿಕೊಡುವುದಾಗಿ ಕೆಲವರು ಜನರನ್ನು ನಂಬಿಸಿ ಕಾಸುಪಡೆಯುತ್ತಿದ್ದು, ಅವರಿಂದ ಮೋಸ ಹೋಗಬೇಡಿ’ ಎಂದು ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಕರೆ ನೀಡಿದ್ದಾರೆ.
`ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಮದ್ಯವರ್ತಿಗಳ ಅವಷ್ಯಕತೆ ಇಲ್ಲ. ಸರ್ಕಾರಿ ಕೆಲಸ ಮಾಡಿಕೊಡಲು ಯಾರೂ ಹಣ ಕೇಳುವುದಿಲ್ಲ. ಅದಾಗಿಯೂ ನೌಕರರು ಹಣ ಕೇಳಿದರೆ ಆ ಬಗ್ಗೆ ತಮ್ಮ ಗಮನಕ್ಕೆ ತರಬೇಕು’ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ `ಕೆಲ ವ್ಯಕ್ತಿಗಳು ಸರ್ಕಾರಿ ಕೆಲಸ ಮಾಡಿಕೊಡುವುದಾಗಿ ಜನರನ್ನು ನಂಬಿಸಿ ಹಣಪಡೆಯುತ್ತಿದ್ದಾರೆ. ಅನಧಿಕೃತ ಸಂಘಟನೆಗಳು ಈ ಕೆಲಸ ಮಾಡುತ್ತಿದ್ದು, ಜನ ಮೋಸ ಹೋಗಬಾರದು’ ಎಂದವರು ಅರಿವು ಮೂಡಿಸಿದ್ದಾರೆ.
`ಪಿಂಚಣಿ, ಪಡಿತರ ಚೀಟಿ, ಭೂ ದಾಖಲೆ ಸೇರಿ ಎಲ್ಲಾ ಬಗೆಯ ಪ್ರಮಾಣ ಪತ್ರಗಳು ಈಗಾಗಲೇ ಡಿಜಿಟಲೀಕರಣವಾಗಿದೆ. ಇದಕ್ಕೆ ಮಧ್ಯವರ್ತಿಗಳ ಅವಶ್ಯಕತೆಯಿಲ್ಲ. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುವುದು ಹಾಗೂ ಅಲ್ಲಿಂದಲೇ ವಿವಿಧ ದಾಖಲೆ ಸಲ್ಲಿಸಿದರೆ ನಿಗಧಿತ ಅವಧಿಯೊಳಗೆ ಪ್ರಮಾಣ ಪತ್ರ ಸಿಗುತ್ತದೆ. ಅದಾಗಿಯೂ, ಕೆಲವರು ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಹೆಸರಿನಲ್ಲಿ ಕೆಲವರು ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಶ್ರೀಕೃಷ್ಣ ಕಾಮ್ಕರ್ ಹೇಳಿದ್ದಾರೆ.
`ನಾಡ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿ ಕೌಂಟರ್ ಮೂಲಕವೂ ಜನ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಸರ್ಕಾರದ ಅಧಿಕೃತ ಕೆಲಸಗಳಿಗೆ ಅಡಚಣೆ ಆದರೆ ಜನ ನೇರವಾಗಿ ತಹಶೀಲ್ದಾರರನ್ನು ಭೇಟಿ ಮಾಡಬೇಕು. ಇಲ್ಲವೇ ಶಿರಸ್ತೆದಾರರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು. ಮೂರನೇ ವ್ಯಕ್ತಿಯ ನೆರವುಪಡೆಯಲು ಹೋಗಿ ಮೋಸ ಹೋಗಬಾರದು’ ಎಂದವರು ಹೇಳಿದ್ದಾರೆ.
`ಸರ್ಕಾರದ ಯೋಜನೆಪಡೆಯಲು ಯಾರಿಗೂ ಹಣ ಕೊಡಬೇಕಾಗಿಲ್ಲ. ಸರ್ಕಾರಿ ಅಧಿಕಾರಿಗಳ ಜೊತೆ ಖಾಸಗಿ ವ್ಯಕ್ತಿಗಳಿಗೆ ಹಣ ನೀಡುವುದು ಸಹ ಅಪರಾಧವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಸಂಘಟನೆಯವರು ದುಡ್ಡು ಕೇಳಿದರೆ ದೂರು ಕೊಡಿ’ ಎಂದವರು ಮನವಿ ಮಾಡಿದ್ದಾರೆ.
