ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರರ ನಡುವೆ ಹೊನ್ನಾವರದಲ್ಲಿ ಮಾರಾಮಾರಿ ನಡೆದಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.
ಹೊನ್ನಾವರ ಹಳದಿಪುರ ಈರಪ್ಪನಹಿತ್ಲದ ಪಾಂಡು ಹರಿಕಂತ್ರ ಅವರು ತಮ್ಮ ಮಕ್ಕಳಾದ ಗಣೇಶ ಹರಿಕಂತ್ರ, ಪವನರಾಜ ಹರಿಕಂತ್ರ ಜೊತೆ ಮೀನುಗಾರಿಕೆ ಮಾಡಿಕೊಂಡಿದ್ದರು. ಅಗಸ್ಟ 4ರಂದು ಮೂರು ಜನ ಸೇರಿ ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿ ಮರಳಿದಾಗ ಅವರಿಗೆ ಆತಂಕ ಎದುರಾಯಿತು.
ಸಮುದ್ರದಲ್ಲಿದ್ದ ದೋಣಿಯನ್ನು ದಡಕ್ಕೆ ಎಳೆಯುತ್ತಿರುವಾಗ ಅಲ್ಲಿ ಅದೇ ಊರಿನ ಗಣಪತಿ ಹರಿಕಂತ್ರ, ವಸಂತ ಹರಿಕಂತ್ರ ಹಾಗೂ ಚಂದ್ರಕಾoತ ಹರಿಕಂತ್ರ ಆಗಮಿಸಿದರು. ಪಾಂಡು ಹರಿಕಂತ್ರ ಅವರ ದೋಣಿಗೆ ಈ ಮೂವರು ತಮ್ಮ ಪಾತಿದೋಣಿಯನ್ನಿರಿಸಿ ಅಡ್ಡಗಟ್ಟಿದರು. `ತಮಗೆ ದಾರಿ ಬಿಡಿ’ ಎಂದು ಪಾಂಡು ಹರಿಕಂತ್ರ ಅವರು ಹೇಳಿದಾಗ ಎರಡು ಗುಂಪುಗಳ ನಡುವೆ ಜಗಳ ಶುರುವಾಯಿತು.
ಜಗಳ ಹೊಡೆದಾಟದ ಸ್ವರೂಪಪಡೆದಿದ್ದು, ಪಾಂಡು ಹರಿಕಂತ್ರ ಹಾಗೂ ಅವರ ಮಕ್ಕಳ ಮೇಲೆ ಎದುರಾಳಿ ಗುಂಪಿನವರು ದಾಳಿ ಮಾಡಿದರು. ಆಗ ಕಡಲತೀರದಲ್ಲಿದ್ದ ಮಂಜುನಾಥ ಹರಿಕಂತ್ರ, ವಾಸು ಹರಿಕಂತ್ರ ಆಗಮಿಸಿ ಈ ಹೊಡೆದಾಟ ತಪ್ಪಿಸಿದರು.
ಹೊಡೆದಾಟದಲ್ಲಿ ಪೆಟ್ಟು ಮಾಡಿಕೊಂಡವರು ಆಸ್ಪತ್ರೆ ಸೇರಿದ್ದು, ಚೇತರಿಸಿಕೊಂಡ ನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಪಾಂಡು ಹರಿಕಂತ್ರ ನೀಡಿದ ದೂರಿನ ಅನ್ವಯ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
