ಕಾರವಾರದಲ್ಲಿ ಖಾರ್ಲಾಂಡ್ ನಿರ್ಮಾಣ ಕಾಮಗಾರಯಲ್ಲಿ ಗೋಲ್ಮಾಲ್ ನಡೆದಿದೆ. ಗುತ್ತಿಗೆದಾರ ಪ್ರಶಾಂತ ನಾಯಕ ಎಂಬಾತರು ಸರ್ಕಾರವನ್ನು ಯಾಮಾರಿಸಿ 90 ಲಕ್ಷ ರೂ ಕೊಳ್ಳೆ ಹೊಡೆದಿದ್ದಾರೆ!
ಕಾರವಾರದ ಶಿರವಾಡ ಗ್ರಾಮದಲ್ಲಿ ಖಾರ್ಲಾಂಡ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಉದ್ದೇಶಿಸಿತ್ತು. ಈ ನಿರ್ಮಾಣ ಕೆಲಸವನ್ನು ಮಂಜುನಾಥ ಕನಸ್ಟಕ್ಷನ್ ಎಂಬ ಕಂಪನಿಗೆವಹಿಸಿತ್ತು. 1.50 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಬೇಕಿದ್ದು, ಕಿಂಚಿತ್ತು ಕೆಲಸ ನಡೆಯದಿದ್ದರೂ ಸಣ್ಣ ನೀರಾವರಿ ಇಲಾಖೆ ಕಂಪನಿ ಖಾತೆಗೆ 90 ಲಕ್ಷ ರೂ ವರ್ಗಾಯಿಸಿದೆ. ಕಂಪನಿ ಮುಖ್ಯಸ್ಥ ಪ್ರಶಾಂತ ನಾಯಕ ಅಲ್ಲಿದ್ದ ಕಾಂಡ್ಲಾ ಕಾಡು ನಾಶ ಮಾಡಿ ಕೋಟಿ ಸಮೀಪದ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಿದಾಗ ಎಲ್ಲಾ ಕೆಲಸ ಮುಕ್ತಾಯದ ಹಂತದಲ್ಲಿರುವ ಬಗ್ಗೆ ಕಾಣಿಸಿತು. ಸ್ಥಳ ಪರಿಶೀಲನೆ ಮಾಡಿದ ಕಾರವಾರ ತಾಲೂಕು ಗುತ್ತಿಗೆದಾರರ ಸಂಘದವರಿಗೆ ಅಲ್ಲಿ ಕೆಲಸ ನಡೆದ ಕುರುಹು ಕಾಣಲಿಲ್ಲ. 20 ಲಕ್ಷ ರೂ ಮೌಲ್ಯದ ಕೆಲಸವನ್ನು ಮಾಡದೇ 90 ಲಕ್ಷ ರೂ ಲಪಟಾಯಿಸಿದ ಬಗ್ಗೆ ಗುತ್ತಿಗೆದಾರ ಸಂಘದವರೇ ಆಕ್ಷೇಪಿಸಿದರು. ನಕಲಿ ದಾಖಲೆ ಸೃಷ್ಠಿಸಿ ಸರ್ಕಾರಕ್ಕೆ ಮೋಸ ಮಾಡಿದ ಗುತ್ತಿಗೆದಾರನ ವಿರುದ್ಧ ದೂರು ನೀಡಿದರು.
`ಸರ್ಕಾರಕ್ಕೆ ಮೋಸ ಮಾಡಿದ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಬೇಕು. ನಕಲಿ ಬಿಲ್ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಇಲಾಖೆ ಅಧಿಕಾರಿಗಳನ್ನು ಸಹ ವಿಚಾರಣೆಗೆ ಒಳಪಡಿಸಬೇಕು. ಪಾವತಿಯಾದ ಮೊತ್ತವನ್ನು ಕೂಡಲೇ ಹಿಂಪಡೆಯಬೇಕು. ಭವಿಷ್ಯದಲ್ಲಿ ಇಂಥ ಅಪರಾತರ ನಡೆಯದ ಹಾಗೇ ನೋಡಿಕೊಳ್ಳಬೇಕು’ ಎಂದು ಗುತ್ತಿಗೆದಾರ ಸಂಘದವರು ಆಗ್ರಹಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ, ಶಾಸಕರ ಕಚೇರಿ ಸೇರಿ ವಿವಿಧ ಕಡೆ ದೂರು ನೀಡಿದರು.
