ಹೊನ್ನಾವರದ ಎಚ್ ಪಿ ಮಾತೋಶ್ರೀ ಸಿಎನ್ಜಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ರಮಾಕಾಂತ ಮಡಿವಾಳ ಅವರ ಮೇಲೆ ಮೂವರು ಹಲ್ಲೆ ನಡೆಸಿದ್ದು, ಪೆಟ್ರೋಲ್ ಬಂಕಿನ ಕಚೇರಿಗೂ ಹಾನಿ ಮಾಡಿದ್ದಾರೆ.
ಹೊನ್ನಾವರದ ಹಳದಿಪುರ ಬಳಿಯ ಜೋಗ್ನಿಕಟ್ಟೆಯ ರಮಾಕಾಂತ ಮಡಿವಾಳ ಅವರು ಕಳೆದ 10 ವರ್ಷಗಳಿಂದ ಎಚ್ ಪಿ ಮಾತೋಶ್ರೀ ಸಿಎನ್ಜಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈವರೆಗೂ ಅವರಿಗೆ ಅಲ್ಲಿ ಇಂಥ ಕೆಟ್ಟ ಅನುಭವ ಆಗಿರಲಿಲ್ಲ. ಅಗಸ್ಟ 10ರ ರಾತ್ರಿ ಆ ಪೆಟ್ರೋಲ್ ಬಂಕಿಗೆ ಕುಮಟಾ ಮಿರ್ಜಾನಿನ ಬಾಲಕೃಷ್ಣ ನಾಯ್ಕ ಅವರು ಕಾರು ಓಡಿಸಿಕೊಂಡು ಬಂದಿದ್ದು, ಕಾರಿಗೆ ಸಿಎನ್ಜಿ ಗ್ಯಾಸ್ ತುಂಬುವoತೆ ಸೂಚಿಸಿದರು. ತಾಪಮಾನ ಕಡಿಮೆಯಿದ್ದ ಕಾರಣ ಗ್ಯಾಸ್ ಸರಿಯಾಗಿ ಹೋಗುತ್ತಿರಲಿಲ್ಲ. ಗ್ಯಾಸ್ ತುಂಬಲು ತಡವಾದ ಕಾರಣ ಕಾರಿನಿಂದ ಇಳಿದ ಬಾಲಕೃಷ್ಣ ನಾಯ್ಕ ಅವರು `ಏನು ತಮಾಷೆ ಮಾಡುತ್ತಿದ್ದೀಯಾ?’ ಎಂದು ಪ್ರಶ್ನಿಸಿದರು. ಆಗ, ಕಾರಿನಲ್ಲಿದ್ದ ಕುಮಟಾ ಅಘನಾಶಿನಿಯ ಪುರಂಧರ ಗೌಡ ಹಾಗೂ ಕುಮಟಾ ಕಿಮಾನಿಯ ದೇವರಾಜ ಹರಿಕಂತ್ರ ಸಹ ಕಾರಿನಿಂದ ಇಳಿದು ದಬಾಯಿಸಿದರು.
ಅಲ್ಲಿದ್ದ ಕುಮಟಾ ನಾಗೂರಿನ ಸಚಿನ್ ಹರಿಕಂತ್ರ ಅವರ ಜೊತೆ ಸೇರಿ ಆ ಮೂವರು ರಮಾಕಾಂತ ಮಡಿವಾಳ ಅವರ ಕೆನ್ನೆಗೆ ಬಾರಿಸಿದರು. ನೋವು ಎಂದು ಕೂಗಿದಾಗ ಇನ್ನಷ್ಟು ಹಿಡಿದು ಥಳಿಸಿದರು. ಅದಾದ ನಂತರ ಅಲ್ಲಿ ಕೆಲಸ ಮಾಡುವ ಅಭಿಷೇಕ ಹರಿಕಂತ್ರ, ಗೋಪಾಲ ಹರಿಕಂತ್ರ ಸೇರಿ ಈ ಹೊಡೆದಾಟ ಬಿಡಿಸಿದರು. ಆ ನಾಲ್ವರು ಸೇರಿ ಪೆಟ್ರೊಲ್ ಬಂಕಿನ ಬಾಗಿಲನ್ನು ಸಿಟ್ಟಿನಿಂದ ಗುದ್ದಿದ್ದು, ಬಾಗಿಲು ಸಹ ಹಾನಿಗೊಳಗಾಯಿತು.
ಹೊಡೆದಾಟದಲ್ಲಿ ಗಾಯಗೊಂಡಿದ್ದ ರಮಾಕಾಂತ ಮಡಿವಾಳ ಅವರನ್ನು ನರೇಂದ್ರ ಮುಕ್ರಿ ಅವರು ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಕೊಂಚ ಚೇತರಿಸಿಕೊಂಡ ರಮಾಕಾಂತ ಮಡಿವಾಳ ಅವರು ಬಾಲಕೃಷ್ಣ ನಾಯ್ಕ, ಪುರಂಧರ ಗೌಡ, ದೇವರಾಜ ಹರಿಕಂತ್ರ ಹಾಗೂ ಸಚಿನ್ ಹರಿಕಂತ್ರ ಅವರಿಂದ ಆದ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
