ಮೂರು ವರ್ಷದ ಹಿಂದಿನ ಯಲ್ಲಾಪುರ ಜಾತ್ರೆಯಲ್ಲಿ ಪಟ್ಟಣದ ತುಂಬ ಹಾಕಲಾಗಿದ್ದ ಬೀದಿ ದೀಪಗಳು ರಾತ್ರಿ ವೇಳೆ ಸರಿಯಾಗಿ ಬೆಳಗುತ್ತಿಲ್ಲ. ಹಗಲಿನಲ್ಲಿ ಬೆಳಗುವ ಕೆಲ ಬೀದಿ ದೀಪಗಳಿಂದ ಯಾರಿಗೂ ಪ್ರಯೋಜನವಿಲ್ಲ!
ಯಲ್ಲಾಪುರ ಜಾತ್ರೆಯ ವೇಳೆ ಎಲ್ಲಾ ಬೀದಿ ದೀಪಗಳು ಸರಿಯಾಗಿದ್ದು. ಜಾತ್ರೆಯ ಮೆರಗು ಹೆಚ್ಚಿಸಲು ಬೀದಿ ದೀಪ ಕಾರಣವಾಗಿದ್ದು, ಇಲ್ಲಿನ ಸೌಂದರ್ಯವನ್ನು ಅನೇಕರು ಕೊಂಡಾಡಿದ್ದರು. ಆದರೆ, ಮೂರು ವರ್ಷದ ಒಳಗೆ ಆ ಬೀದಿ ದೀಪಗಳು ನಿರ್ವಹಣೆಯಿಲ್ಲದೇ ಹಾಳಾಗಿದೆ. ಬೀದಿ ದೀಪ ಅಳವಡಿಸಿದ್ದ ಲೋಕೋಪಯೋಗಿ ಇಲಾಖೆ ದೀಪಗಳ ಜವಾಬ್ದಾರಿ ಹೋರುವಂತೆ ಪಟ್ಟಣ ಪಂಚಾಯತಗೆ ಪತ್ರ ಬರೆದಿದೆ. ಎಲ್ಲಾ ಬೀದಿದೀಪ ಸರಿಪಡಿಸಿ ಅದನ್ನು ಹಸ್ತಾಂತರ ಮಾಡುವಂತೆ ಪಟ್ಟಣ ಪಂಚಾಯತ ಮರು ಪತ್ರ ನೀಡಿದೆ. ಈ ಎಲ್ಲದರ ನಡುವೆ ಬೀದಿ ದೀಪ ಸರಿ ಮಾಡಿಕೊಡಬೇಕಿದ್ದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ.
ರಾತ್ರಿಯಾದ ತಕ್ಷಣ ಸ್ವಯಂ ಚಾಲಿತವಾಗಿ ಬೀದಿ ದೀಪ ಉರಿದು ಬೆಳಗ್ಗೆ ಸ್ವಯಂ ಚಾಲಿತವಾಗಿ ಬೀದಿ ದೀಪ ಬಂದ್ ಆಗುವ ಟೈಮರ್ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿತ್ತು. ಆದರೆ, ಟೈಮರ್ ವ್ಯವಸ್ಥೆ ಹದಗೆಟ್ಟ ಕಾರಣ ಅನೇಕ ಬೀದಿ ದೀಪಗಳು ಹಗಲಿನಲ್ಲಿ ಉರಿಯುತ್ತಿವೆ. ರಾತ್ರಿ ವೇಳೆ ಅವು ನಿದ್ರಿಸುತ್ತಿವೆ. ಇನ್ನೂ ಕೆಲವು ಬೀದಿ ದೀಪಗಳು ಹಗಲಿನಲ್ಲಿಯೂ ಉರಿಯುತ್ತಿಲ್ಲ. ರಾತ್ರಿಯೂ ಉರಿಯುತ್ತಿಲ್ಲ. ಜಾತ್ರೆ ನಂತರ ಎಲ್ಲಾ ದೀಪಗಳು ಒಟ್ಟಿಗೆ ಉರಿದಿದನ್ನು ಈವರೆಗೂ ನೋಡಿದರವರಿಲ್ಲ.
ಶಿರಸಿ ಹಾಗೂ ಮುಂಡಗೋಡು ರಸ್ತೆಯಲ್ಲಿ ಬೀದಿ ದೀಪದ ಕಂಬ ಮುರಿದು ಬಿದ್ದಿದೆ. ಇನ್ನೂ ಕೆಲವು ಕಡೆ ಅವು ಬಾಗಿವೆ. ಆದರೆ, ಅದನ್ನು ಸರಿಪಡಿಸುವ ಕೆಲಸಕ್ಕೂ ಯಾರು ಹೋಗಿಲ್ಲ. `ಪಟ್ಟಣ ಪಂಚಾಯತ ಇಂಜಿನಿಯರ್ ಜೊತೆ ಒಮ್ಮೆ ರಾತ್ರಿಯಿಡೀ ಸುತ್ತಾಟ ನಡೆಸಲಾಗಿದ್ದು, ಯಾವ ಯಾವ ಬೀದಿ ದೀಪ ಹಾಳಾಗಿದೆ ಎಂಬುದನ್ನು ಗಮನಕ್ಕೆ ತರಲಾಗಿದೆ. ಕೂಡಲೇ ಎಲ್ಲಾ ಬೀದಿ ದೀಪ ಸರಿಪಡಿಸುವಂತೆ ಒತ್ತಾಯಿಸಿದ್ದೇನೆ’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಮಾಹಿತಿ ನೀಡಿದ್ದಾರೆ. `ಜನರ ಒಳತಿಗಾಗಿ ಬೀದಿ ದೀಪ ಹಾಕಲಾಗಿದೆ ಎಂದು ಮೊದಲು ಭಾವಿಸಲಾಗಿತ್ತು. ಆದರೆ, ಆ ಬೀದಿ ದೀಪ ಅಳವಡಿಸಿದ್ದು ಗುತ್ತಿಗೆದಾರರ ಒಳತಿಗೆ ಎಂಬ ಅನುಮಾನ ಮೂಡಿದೆ’ ಎಂದವರು ಹೇಳಿದ್ದಾರೆ.
