ಅಂಕೋಲಾದ ಅಚವೆ ಬಳಿ ಯುವತಿಯೊಬ್ಬರು ತೆಂಗಿನ ಮರದ ಕಾಯಿ ತಲೆ ಮೇಲೆ ಬೀಳುವುದನ್ನು ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾವಿಗೆ ಬಿದ್ದು ಸಾವನಪ್ಪಿದ್ದಾರೆ.
ಅಚವೆಯ ಚನಗಾರಿನಲ್ಲಿ ವಾಸವಾಗಿರುವ ಪುಂಡ್ಲಿಕ್ ಗೌಡ ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ತೆಂಗಿನ ಮರ ಹತ್ತುವ ಕೌಶಲ್ಯಹೊಂದಿದ ಅವರು ಅಗಸ್ಟ 12ರ ಬೆಳಗ್ಗೆ ಸೀಯಾಳ ಕೊಯ್ಯಲು ಮರ ಹತ್ತಿದ್ದರು. ಈ ವೇಳೆ ಅವರ ಪುತ್ರಿ ವೀಣಾ ಗೌಡ (32) ಮರದ ಬುಡಕ್ಕೆ ಬಂದಿದ್ದು, ಮರದಿಂದ ಕಾಯಿ ಬೀಳುತ್ತಿದ್ದವು.
ವೀಣಾ ಗೌಡ ಅವರನ್ನು ಉದ್ದೇಶಿಸಿ ಪುಂಡ್ಲಿಕ್ ಗೌಡ ಅವರು `ಕಾಯಿ ಬೀಳುತ್ತಿದೆ. ದೂರ ಸರಿ’ ಎಂದು ಕೂಗಿದರು. ಜೀವ ಉಳಿಸಿಕೊಳ್ಳುವ ಗಡಬಿಡಿಯಲ್ಲಿ ವೀಣಾ ಗೌಡ ಅವರು ಎರಡು ಹೆಜ್ಜೆ ಹಿಂದೆ ಸರಿದರು. ಆದರೆ, ಅಲ್ಲಿಯೇ ನೀರು ತುಂಬಿದ್ದ ನೆಲಬಾವಿಯಿದ್ದು, ಅದರೊಳಗೆ ವೀಣಾ ಗೌಡ ಅವರು ಬಿದ್ದರು.
ಆ ಕ್ಷಣಕ್ಕೆ ನೀರಿನಿಂದ ಮೇಲೆ ಬರಲಾಗದೇ ವೀಣಾ ಗೌಡ ಅವರು ತಡಬಡಿಸಿದರು. ತೆಂಗಿನ ಮರ ಏರಿದ್ದ ಗೌಡರು ಕೆಳಗೆ ಇಳಿದು ಬರುವಷ್ಟರಲ್ಲಿ ವೀಣಾ ಗೌಡ ಅವರು ಸಾವನಪ್ಪಿದ್ದರು. ಈ ವಿಷಯ ಅರಿತ ಅಂಕೋಲಾ ಪಿಎಸ್ಐ ಗುರುನಾಥ ಹಾದಿಮನಿ ಅವರು ಚನಗಾರಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಅವರು ನೀಡಿದ ಮಾಹಿತಿ ಸ್ವೀಕರಿಸಿ ಪ್ರಕರಣ ದಾಖಲಿಸಿದರು.
