ಹಳಿಯಾಳದ ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ ನಡೆಸಿದ ಮೂವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕ ಶಾಂತಿಗೆ ತೊಂದರೆ ನೀಡಿದ ಆರೋಪದ ಅಡಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಗಸಲಕಟ್ಟಾದ ಶಿವಾಜಿ ಗಿರಿ, ದೇಶಪಾಂಡೆ ನಗರದ ಮಡ್ಡಿಯ ಸಾಗರ್ ತಾಮಸೆ ಹಾಗೂ ಆಶ್ರಯ ರೋಡಿನ ಆನಂದ ಬಳ್ಳಾರಿ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಅಗಸ್ಟ 10ರ ನಸುಕಿನ 4 ಗಂಟೆಗೆ ಈ ಎಲ್ಲರೂ ಕೆಸ್ರೊಳ್ಳಿ ಹತ್ತಿರ ಗಲಾಟೆ ಮಾಡುತ್ತಿದ್ದ ಹಿನ್ನಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಈ ಮೂವರು ನಸುಕಿನಲ್ಲಿ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದು, ಪರಸ್ಪರ ಕೆಟ್ಟದಾಗಿ ಬೈದುಕೊಳ್ಳುತ್ತಿದ್ದರು. ಆ ಜಗಳ ಕ್ರಮೇಣ ಹೊಡೆದಾಟದ ಸ್ವರೂಪಪಡೆಯಿತು. ಇದರಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಿದ್ದು, ಪೊಲೀಸ್ ಸಿಬ್ಬಂದಿ ವಿನೋದ ಜಿಬಿ ಅದನ್ನು ಗಮನಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಸುಮೋಟೋ ಪ್ರಕರಣ ದಾಖಲಿಸಿದರು.
