`ನ್ಯಾಯ ನೀತಿಯೇ ನಮ್ಮ ಧ್ಯೇಯ’ ಎಂದು ಸಾರುತ್ತಿರುವ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು `ರಾಜಿ ಸಂಧಾನವೇ ಮನೋಧರ್ಮ’ ಎಂಬ ತತ್ವದ ಅಡಿ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಬಗೆಹರಿಸಲು ಹೆಚ್ಚಿನ ಆಸಕ್ತಿವಹಿಸಿದ್ದಾರೆ. ಸೆ 13ರಂದು ನಡೆಯಲಿರುವ ಲೋಕ ಅದಾಲತ್’ನಲ್ಲಿ ಈ ಬಾರಿ 5 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಮಾತುಕಥೆಯಲ್ಲಿ ಮುಗಿಸಲು ಅವರು ಉದ್ದೇಶಿಸಿದ್ದಾರೆ.
`ಸಮಯ ಹಾಗೂ ಹಣ ಉಳಿತಾಯದ ದೃಷ್ಠಿಯಿಂದ ರಾಜಿ ಸಂದಾನ ಅತಿ ಮುಖ್ಯ. ಅದರೊಂದಿಗೆ ಸೋಲು-ಗೆಲುವು ದ್ವೇಷಕ್ಕೆ ಕಾರಣವಾಗುವ ಸಾಧ್ಯತೆಯಿದ್ದು, ಲೋಕ ಅದಾಲತ್’ನಲ್ಲಿ ಸೋಲು-ಗೆಲುವಿಗಿಂತಲೂ ವಿಶ್ವಾಸಾರ್ಹತೆ ಹಾಗೂ ಸ್ನೇಹ ಮುಖ್ಯವಾಗಲಿದೆ’ ಎಂಬುದು ಕಾನೂನು ತಜ್ಞರ ಅಭಿಮತ. ಈ ಹಿನ್ನಲೆ `ಧೀರ್ಘಕಾಲದವರೆಗೆ ನ್ಯಾಯಾಲಯದಲ್ಲಿ ಹೋರಾಟ ನಡೆಸುವ ಬದಲು ರಾಜಿಸೂತ್ರದ ಮೂಲಕ ಎದುರುದಾರರಿಗೂ ಹೊರೆಯಾಗದ ರೀತಿ ನ್ಯಾಯಪಡೆಯಲು ಸಾಧ್ಯ’ ಎಂದು ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿಯೂ ಆಗಿರುವ ದಿವ್ಯಶ್ರೀ ಸಿ ಎಂ ಅವರು ಪ್ರತಿಪಾದಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 38744 ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ನ್ಯಾಯಾಧೀಶರು ಕಕ್ಷಿದಾರರ ಮನವೊಲೈಸುವ ಪರಿಣಾಮ ಕಳೆದ ಬಾರಿ 6263 ಪ್ರಕರಣಗಳು ರಾಜಿಯಲ್ಲಿ ಅಂತ್ಯವಾಗಿವೆ. ಈ ಬಾರಿ 5 ಸಾವಿರಕ್ಕೂ ಅಧಿಕ ಪ್ರಕರಣಗಳು ರಾಜಿಯಲ್ಲಿ ಮುಕ್ತಾಯಗೊಳ್ಳುವ ಲಕ್ಷಣಗಳಿವೆ. ಚೆಕ್ ಬೌನ್ಸ್, ವಿಮಾ ಪರಿಹಾರ, ಸಣ್ಣಪುಟ್ಟ ಜಗಳ-ಹೊಡೆದಾಟ, ಕೌಟುಂಬಿಕ ಕಲಹ ಮೊದಲಾದ ಪ್ರಕರಣಗಳು ರಾಜಿ ಮೂಲಕ ಬಗೆಹರಿಯಲಿದ್ದು ಇದರಿಂದ ನ್ಯಾಯಾಲಯದ ಮೇಲಿರುವ ಒತ್ತಡಗಳು ಕಡಿಮೆ ಆಗಲಿದೆ.
ಇದರೊಂದಿಗೆ `ಸಾರ್ವಜನಿಕ ಸೇವೆಗೆ ಸಂಬ0ಧಿಸಿದ ಅಂಚೆ, ದೂರವಾಣಿ, ವಿದ್ಯುತ್, ನೀರು ಸರಬರಾಜು ಮೊದಲಾದ ಸಂಸ್ಥೆಗಳ ಸಮಸ್ಯೆ ಬಗ್ಗೆ ಜನತಾ ನ್ಯಾಯಾಲಯದಲ್ಲಿ ಜನ ದೂರು ಕೊಡಬಹುದು. ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ, ಚರಂಡಿ ವ್ಯವಸ್ಥೆಯ ಕಾರ್ಯಗಳು, ವಿಮಾ ಸೇವೆಗಳು ಆಸ್ಪತ್ರೆ ಅಥವಾ ಔಷಧಾಲಯಗಳ ಸೇವೆಗಳ ಬಗ್ಗೆ ಯಾವುದೇ ಶುಲ್ಕ ಪಾವತಿಸದೇ ಪ್ರಕರಣ ದಾಖಲಿಸಿ ಸಮಸ್ಯೆಯಿಂದ ಪರಿಹಾರಪಡೆಯಲು ಸಾಧ್ಯ’ ಎಂದು ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಹೇಳಿದ್ದಾರೆ.
`ಸಿವಿಲ್ ಡಿಕ್ರಿಯಷ್ಟೇ ಪ್ರಮಾಣದ ಕಾನೂನು ಮಾನ್ಯತೆಪಡೆದಿರುವ ಖಾಯಂ ಜನತಾ ನ್ಯಾಯಾಲಯದ ಅರ್ವಾಡ ಅಧಿಕಾರ ಹೊಂದಿರುತ್ತದೆ. ಈ ನ್ಯಾಯಾಲಯದಲ್ಲಿ 1 ಕೋಟಿ ಮೌಲ್ಯದ ವ್ಯಾಜ್ಯಗಳ ಬಗೆ ಹರಿಸಿಕೊಳ್ಳುವ ಅವಕಾಶವಿದೆ’ ಎಂದವರು ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
