ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕಡೆ ಸಹಾಯಕ ಆಯುಕ್ತರ ಕಚೇರಿಯಿದ್ದು, ಎರಡು ಕಡೆ ಖಾಯಂ ಅಧಿಕಾರಿಗಳಿಲ್ಲ. ಇನ್ನೆರಡು ಕಡೆ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಪ್ರಭಾರಿ ಹುದ್ದೆ ಜವಾಬ್ದಾರಿ ನೀಡಿರುವುದರಿಂದ ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ.
ಹೀಗಾಗಿ `ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿಯಿರುವ ಸಹಾಯಕ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಪತ್ರ ಬರೆದಿದೆ. ಕಾರವಾರ ಹಾಗೂ ಭಟ್ಕಳದ ಸಹಾಯಕ ಆಯುಕ್ತರು ವರ್ಗವಾಗಿದ್ದು, ಈವರೆಗೂ ಅಲ್ಲಿ ಹೊಸ ಅಧಿಕಾರಿಗಳ ನೇಮಕಾತಿ ನಡೆದಿಲ್ಲ. ಶಿರಸಿ ಉಪವಿಭಾಗಾಧಿಕಾರಿಗಳಿಗೆ ಹೆಚ್ಚುವರಿಯಾಗಿ ಭಟ್ಕಳದ ಜವಾಬ್ದಾರಿ ನೀಡಲಾಗಿದೆ. ಕುಮಟಾ ವಿಭಾಗಾಧಿಕಾರಿಗಳಿಗೆ ಕಾರವಾರದ ಜವಾಬ್ದಾರಿ ನೀಡಲಾಗಿದೆ. ಇದರಿಂದ ಜನರಿಗೆ ಸಮಸ್ಯೆಯಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
`ಮಕ್ಕಳನ್ನು ಆರೈಕೆ ಮಾಡದ ಪಾಲಕರ ಬಗ್ಗೆ ಉಪವಿಭಾಗಾಧಿಕಾರಿ ವಿಚಾರಣೆ ನಡೆಸುತ್ತಾರೆ. ಆದರೆ, ವಿಚಾರಣೆ ನಡೆಸಲು ವಿಭಾಗಾಧಿಕಾರಿಗಳೇ ಇಲ್ಲದ ಕಾರಣ ವೃದ್ಧರು ನ್ಯಾಯಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಸಾಕಷ್ಟು ವೃದ್ಧರು ತಮಗಾದ ಅನ್ಯಾಯಕ್ಕೆ ದೂರು ನೀಡಿದ್ದು, ಸುಪ್ರೀಂ ಕೋರ್ಟಿನ ಆದೇಶದ ಪ್ರಕಾರ ಅವರ ಪ್ರಕರಣ 3 ತಿಂಗಳಿನಲ್ಲಿ ಬಗೆಹರಿಯುತ್ತಿಲ್ಲ’ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
`ವೃದ್ಧ ಜೀವಗಳಿಗೆ ಆಗಿರುವ ಸಮಸ್ಯೆ ಪರಿಗಣಿಸಿ ಕೂಡಲೇ ಅಗತ್ಯವಿರುವ ಕಡೆ ಅಧಿಕಾರಿಗಳ ನೇಮಕಾತಿ ನಡೆಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್, ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಹಿರಿಯ ನಾಗರಿಕರಾದ ಮಹಾಬಲಿ, ಸುಶೀಲ ನಾಯ್ಕ, ರಾಜಮ್ಮ ನಾಯರ್, ಶೇಶಗಿರಿ ಗೌಡ, ಗಣಪು ಮುಕ್ರಿ, ತ್ಯಾಗರಾಜ್ ಮುಕ್ರಿ, ರೇಣುಕಾ ಗೌಡ, ಪಾಂಡುರAಗ ನಾಯ್ಕ, ಮಂಜುನಾಥ ಇತರರು ಪತ್ರದ ಮೂಲಕ ಆಗ್ರಹಿಸಿದ್ದಾರೆ.
