`ಉತ್ತರ ಕನ್ನಡ ಜಿಲ್ಲೆಯ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದು ಸಾಕು. ಮತ್ತೆ ಯಾವುದೇ ಯೋಜನೆಯ ಬಾರ ನಮ್ಮ ಮೇಲೆ ಬೇಡ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಸದನದಲ್ಲಿ ಸದ್ದು ಮಾಡಿದ್ದಾರೆ. ಜನ ವಿರೋಧದ ನಡುವೆಯೂ ಶರಾವತಿ ನದಿಯ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧ ಅವರು ಗುಡುಗಿದ್ದಾರೆ.
`ಈಗಾಗಲೇ ಶರಾವತಿ ನದಿಗೆ 7 ಅಣೆಕಟ್ಟು ಕಟ್ಟಿದ್ದಾರೆ. ಅದರಿಂದ ಹಲವು ಸಮಸ್ಯೆಗಳಾಗಿವೆ. ಇದೀಗ 54.155 ಹೆಕ್ಟರ್ ಅರಣ್ಯ ನಾಶ ಮಾಡಿ ಅದೇ ನದಿಗೆ ಮತ್ತೊಂದು ಯೋಜನೆ ಅಗತ್ಯವಿಲ್ಲ. ಇಲ್ಲಿನ ಕಾಡು ಕಡಿಯುವುದು ಬೇಡ’ ಎಂದು ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲಿ ಒತ್ತಾಯಿಸಿದರು. `ಇಲ್ಲಿ ಕಡಿದ ಕಾಡನ್ನು ಬೇರೆ ಕಡೆ ಬಳಸಲು ಸಾಧ್ಯವಿಲ್ಲ’ ಎಂದವರು ಪುನರುಚ್ಚರಿಸಿದರು.
`ಉತ್ತರ ಕನ್ನಡ ಜಿಲ್ಲೆಯ ಜನ ಈಗಾಗಲೇ ಕೈಗಾ, ಸೀಬರ್ಡ, ಬೇಡ್ತಿ ಯೋಜನೆಗಳ ಅಡಿ ನಿರಾಶ್ರಿತರಾಗಿದ್ದಾರೆ. ಅವರಿಗೆ ಸೂಕ್ತ ನೆಲೆ ಕೊಡಲು ಆಗಲಿಲ್ಲ. ಹೀಗಿರುವಾಗ ಇನ್ನಷ್ಟು ಅರಣ್ಯ ನಾಶ ಮಾಡಿ ವಿದ್ಯುತ್ ಉತ್ಪಾದನೆ ಮಾಡುವುದು ಸರಿಯಲ್ಲ’ ಎಂದರು. `ಸಾಗರದಿಂದ ಹೊನ್ನಾವರಕ್ಕೆ ರೈಲ್ವೇ ಯೋಜನೆ ಕೊಡಿ ಎಂದು ನಾವು 10 ವರ್ಷದ ಹಿಂದೆ ಬೇಡಿಕೆ ಸಲ್ಲಿಸಿದ್ದೇವು. ಸಿಂಗಳಿಕ ಸಂತತಿ ನಾಶವಾಗುತ್ತದೆ ಎಂಬ ಕಾರಣ ಕೊಟ್ಟು ಆ ಯೋಜನೆ ನಿರಾಕರಿಸಲಾಗಿತ್ತು. ಇದೀಗ ಅರಣ್ಯ ಇಲಾಖೆ ಕಾಡು ನಾಶಕ್ಕೆ ಹೇಗೆ ಅನುಮತಿ ಕೊಟ್ಟಿದೆ? ಎಂದು ದಿನಕರ ಶೆಟ್ಟಿ ಪ್ರಶ್ನಿಸಿದರು. `ಯಾವುದೇ ಕಾರಣಕ್ಕೂ ಶರಾವತಿ ಪಂಪ್ ಸ್ಟೋರೇಜ್ ಅಗತ್ಯವಿಲ್ಲ’ ಎಂದು ಸದನದಲ್ಲಿ ಧ್ವನಿಯೆತ್ತಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ ಜೆ ಜಾರ್ಜ `ಶರಾವತಿ ನದಿಗೆ ಹೊಸದಾಗಿ ಅಣೆಕಟ್ಟು ಕಟ್ಟುವುದಿಲ್ಲ. ಅಣೆಕಟ್ಟಿನಿಂದ ಹೊರಹೋಗುವ ನೀರನ್ನು ಪಂಪ್ ಮೂಲಕ ಮತ್ತೆ ಅದೇ ಅಣೆಕಟ್ಟಿಗೆ ಬಿಟ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಭೂಮಿಯ ಒಳಗೆ ಪೈಪ್ ಅಳವಡಿಸಿ ನೀರನ್ನು ಅಣೆಕಟ್ಟಿಗೆ ತೆಗೆದುಕೊಂಡು ಹೋಗಲಿದ್ದು, ಪೈಪ್ ಮುಚ್ಚಿದ ನಂತರ ಅಲ್ಲಿ ಮತ್ತೆ ಅರಣ್ಯ ಬೆಳೆಯಲಿದೆ’ ಎಂದು ಉತ್ತರಿಸಿದರು. `ಸದ್ಯ 1 ಸಾವಿರ ಮೇಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಈ ಯೋಜನೆ ಜಾರಿಯಾದಲ್ಲಿ 2 ಸಾವಿರ ಮೇಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗಲಿದೆ’ ಎಂದು ವಿವರಿಸಿದರು. `ಇದಕ್ಕೆ 0.3 ಟಿಎಂಸಿ ನೀರು ಬಳಕೆ ಮಾಡುತ್ತೇವೆ. ನೀರು ಹಾಳಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. `ಇಷ್ಟು ಒಳ್ಳೆಯ ಯೋಜನೆ ಬೇರೆ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟಿದೆ. ಅಧ್ಯಯನ ಮಾಡಿಯೇ ಯೋಜನೆ ಜಾರಿಗೆ ತರುತ್ತೇವೆ’ ಎಂದು ಸಚಿವರು ಉತ್ತರಿಸಿದರು.
`ಈಗಾಗಲೇ ವಿದ್ಯುತ್ ಉತ್ಪಾದನೆಗೆ ಸೋಲಾರ್ ಇದೆ. ಆದರೆ, ಅದು ಹಗಲಿನಲ್ಲಿ ಮಾತ್ರ ಸಿಗುತ್ತದೆ. ಹೀಗಾಗಿ ಈ ಯೋಜನೆಗೆ ವಿರೋಧ ಬೇಡ. ಅದರಿಂದ ಯಾವುದೇ ಹಾನಿ ಇಲ್ಲ’ ಎಂದು ಸಚಿವರು ಸದಕ್ಕೆ ಉತ್ತರಿಸಿದರು. ಆದರೆ, ಇದಕ್ಕೆ ದಿನಕರ ಶೆಟ್ಟಿ ಒಪ್ಪಲಿಲ್ಲ. `ಉತ್ತರ ಭಾರತದ ಜನ ಇಲ್ಲಿ ಬಂದಿದ್ದಾರೆ. ತ್ಯಾಗ ಮಾಡಿದ ಜನರಿಗೆ ಏನು ಸಿಗುತ್ತಿಲ್ಲ. ಈ ಯೋಜನೆ ಮಾಡಲು ನಮ್ಮವರು ಯಾರೂ ಒಪ್ಪುತ್ತಿಲ್ಲ. ಇದು ಬೆಂಗಳೂರಿಗೆ ನೀರು ತರುವ ಯೋಜನೆಯ ಭಾಗವಾಗಿದ್ದು, ನಮಗೆ ಉಪ್ಪು ನೀರು ಕುಡಿಸಬೇಡಿ’ ಎಂದು ಹೇಳಿದರು. `ಕಾಡು ಕಡಿದು ನೀರು ಬೇರೆಡೆ ಒಯ್ದರೆ ನಮ್ಮ ತೋಟ-ಗದ್ದೆಗೆ ನೀರಿರುವುದಿಲ್ಲ’ ಎಂಬ ಆತಂಕವ್ಯಕ್ತಪಡಿಸಿದರು.
